Breaking
6 Aug 2026, Thu

ಕರಾವಳಿಗೆ 3 ದಿನ ‘ರೆಡ್ ಅಲರ್ಟ್ : ಭಾರೀ ಮಳೆ ಸಾಧ್ಯತೆ, ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧ

ಮಂಗಳೂರು : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (IMD) ಜೂನ್ 8ರಿಂದ 10ರವರೆಗೆ ‘ರೆಡ್ ಅಲರ್ಟ್’ಘೋಷಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮೂರು ದಿನಗಳ ಕಾಲ ಗುಡುಗು-ಮಿಂಚು ಹಾಗೂ ಬಿರುಗಾಳಿಯೊಂದಿಗೆ 204.5 ಮಿ.ಮೀ.ಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜೂನ್ 10ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ.

ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಮೂಡುಬಿದಿರೆ, ಬಂಟ್ವಾಳ ಹಾಗೂ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಿಗ್ಗೆ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 28.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 2.1 ಡಿಗ್ರಿ ಕಡಿಮೆಯಾಗಿದೆ. ಕನಿಷ್ಠ ತಾಪಮಾನ 23.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ವಾಡಿಕೆಗಿಂತ 0.3 ಡಿಗ್ರಿ ಇಳಿಕೆಯಾಗಿದೆ.

ಆಡಳಿತ ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳು ಹಾಗೂ ನದಿತೀರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *