ಮಂಗಳೂರು: ಹೊಸ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಳಗೆ ಬಿದ್ದು ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಮೃತಪಟ್ಟ ಘಟನೆ ಪದವಿನಂಗಡಿ ಸಮೀಪ ನಡೆದಿದೆ.

ಮೃತರನ್ನು ಉಳ್ಳಾಲ ಧರ್ಮನಗರ ನಿವಾಸಿ ಸಂತೋಷ್ ಪೂಜಾರಿ (45) ಎಂದು ಗುರುತಿಸಲಾಗಿದೆ. ಸಂತೋಷ್ ಅವರು ರಾಷ್ಟ್ರ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ತೊಕ್ಕೊಟ್ಟು ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರೂ ಆಗಿದ್ದರು. ಜೀವನೋಪಾಯಕ್ಕಾಗಿ ವೆಲ್ಡಿಂಗ್ ಕೆಲಸವೂ ಮಾಡುತ್ತಿದ್ದರು ಎನ್ನಲಾಗಿದೆ.

ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಅವರು ತಲೆಗೆ ತೀವ್ರ ಏಟು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಂತೋಷ್ ಈ ಹಿಂದೆ ವಿದೇಶದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಊರಿಗೆ ಮರಳಿದ ಬಳಿಕ ಉಳ್ಳಾಲ ಬೈಲನಲ್ಲಿ ಸ್ವಂತ ವೆಲ್ಡಿಂಗ್ ಶಾಪ್ ತೆರೆದಿದ್ದರು. ಸಂತೋಷ್ ವಿವಾಹಿತರಾಗಿದ್ದು, ಪತ್ನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಸಂತೋಷ್ ಅವರು ರಾಷ್ಟ್ರ ಮಟ್ಟದಲ್ಲಿ 1 ಬಾರಿ ರಾಜ್ಯ ಮಟ್ಟದಲ್ಲಿ ಮೂರು ಬಾರಿ ಪದಕ ಸಂಪಾದಿಸಿದ್ದರು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದಿದ್ದರು.


