ಬಂಟ್ವಾಳ: ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದು ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ (ಮೇ27) ಮುಂಜಾನೆ ಫರಂಗಿಪೇಟೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ.

ಬಜಪೆ ಕೈಕಂಬ ನಿವಾಸಿ ಅಭಿಜಿತ್ (28) ಮೃತಪಟ್ಟವರು. ಸಹಸವಾರನಾಗಿದ್ದ ಬಸ್ ಕ್ಲೀನರ್ ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಭಿಜಿತ್ ಅವರು ಸ್ನೇಹಿತ ಸಂದೀಪ್ ಅವರನ್ನು ಬೈಕ್‌ನಲ್ಲಿ ಬಂಟ್ವಾಳ ತಾಲೂಕಿನ ಅಮ್ಟಾಡಿಯ ಮನೆಗೆ ಬಿಟ್ಟು ಬರಲು ತೆರಳುತ್ತಿದ್ದ ವೇಳೆ, ಮುಂಜಾನೆ ಸುಮಾರು 3 ಗಂಟೆಯ ಸುಮಾರಿಗೆ ಕಡೆಗೋಳಿ ಬಳಿ ಅಪರಿಚಿತ ವಾಹನ ಹಿಂಬದಿಯಿಂದ ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಢಿಕ್ಕಿಯ ರಭಸಕ್ಕೆ ಬೈಕ್ ಪಲ್ಟಿಯಾಗಿದ್ದು, ಅಭಿಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಸಂದೀಪ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಅಭಿಜಿತ್ ಅವರಿಗೆ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಉದ್ಯೋಗ ದೊರೆತಿದ್ದು, ಮೇ 27ರಂದು ಕೆಲಸಕ್ಕೆ ಹಾಜರಾಗಬೇಕಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


