Breaking
4 Sep 2026, Fri

ಉಡುಪಿ: ಕೋಡಿ ಬೆಂಗ್ರೆ ಬಳಿ ಆಳಸಮುದ್ರ ಬೋಟ್ ಮುಳುಗಡೆ – 6 ಮೀನುಗಾರರ ರಕ್ಷಣೆ, ₹65 ಲಕ್ಷ ನಷ್ಟ

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಿಂದ ತೆರಳಿದ್ದ ಆಳಸಮುದ್ರ ಮೀನುಗಾರಿಕಾ ಬೋಟ್ ಕೋಡಿ ಬೆಂಗ್ರೆ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 6 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಕಿದಿಯೂರು ಪಡುಕರೆಯ ಸಂದೀಪ್ ಕುಮಾರ್ ಅವರಿಗೆ ಸೇರಿದ “ಸಾಯಿದತ್ತ” ಬೋಟ್ ಮೇ 17ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೇ 19ರಂದು ಸಂಜೆ ಸುಮಾರು 4.30ರ ವೇಳೆಗೆ ಕೋಡಿಬೆಂಗ್ರೆ ಸಮುದ್ರ ಪ್ರದೇಶದಲ್ಲಿ ಬೋಟ್‌ನ ಹಿಂಭಾಗದ ಅಡಿಭಾಗಕ್ಕೆ ಯಾವುದೋ ವಸ್ತು ತಾಗಿದ ಪರಿಣಾಮ ನೀರು ಒಳನುಗ್ಗತೊಡಗಿದೆ.

ಈ ವೇಳೆ ತಾಂಡೇಲ ರಾಘವೇಂದ್ರ ಹಾಗೂ ಸಿಬ್ಬಂದಿ ತಕ್ಷಣ ಪರಿಸ್ಥಿತಿ ಅರಿತು ಸಮೀಪದಲ್ಲಿದ್ದ “ಶ್ರೀ ಅಮ್ಮ ಭವಾನಿ” ಬೋಟ್‌ನ ಸಹಾಯ ಕೋರಿದ್ದಾರೆ. ಬೋಟ್‌ನೊಳಗೆ ತುಂಬುತ್ತಿದ್ದ ನೀರನ್ನು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ನಂತರ ಎಲ್ಲಾ ಮೀನುಗಾರರನ್ನು ಸುರಕ್ಷಿತವಾಗಿ ಮತ್ತೊಂದು ಬೋಟ್‌ಗೆ ಸ್ಥಳಾಂತರಿಸಿ, ಮುಳುಗುತ್ತಿದ್ದ ಬೋಟ್ ಅನ್ನು ಮಲ್ಪೆ ಬಂದರಿಗೆ ಎಳೆದುಕೊಂಡು ಬರುತ್ತಿದ್ದ ವೇಳೆ ರಕ್ಷಣಾ ಬೋಟ್‌ನ ಹಿಂಭಾಗದ ಕಂಬ ತುಂಡಾಗಿ, ರಾತ್ರಿ ಸುಮಾರು 11 ಗಂಟೆಗೆ ಬೋಟ್ ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದೆ.

ಘಟನೆಯಲ್ಲಿ ಮೀನು, ಬಲೆ, ಡೀಸೆಲ್ ಸೇರಿದಂತೆ ಸುಮಾರು ₹65 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ರಕ್ಷಿಸಲ್ಪಟ್ಟ ಮೀನುಗಾರರನ್ನು ರಾಘವೇಂದ್ರ, ರೋಹಿದಾಸ್ ಮೊಗೇರ, ಶಾಮ್ ಸುಂದರ್ ಮಲೀಕ್, ಉಜ್ವಲ್ ಮಲೀಕ್, ಸತ್ಯಜಿತ್ ಮಲೀಕ್ ಹಾಗೂ ತ್ರಿಲೇಶ್ ಭಾಸ್ಕರ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *