ಮಂಗಳೂರು ನಗರದ ಜಪ್ಪಿನಮೊಗರು ಬಳಿ ಶನಿವಾರ ಮುಂಜಾನೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 27 ಕೋಣಗಳನ್ನು ಕಂಕನಾಡಿ ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕೋಣಗಳನ್ನು ಯಾವುದೇ ಪರವಾನಗಿ ಇಲ್ಲದೆ ಹಾಗೂ ಅಮಾನವೀಯ ರೀತಿಯಲ್ಲಿ ಈಚರ್ (Eicher) ವಾಹನದಲ್ಲಿ ತುಂಬಿಸಿ ಹಾವೇರಿಯಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಬಳಿ ವಾಹನದ ಚಲನವಲನದ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಆಧರಿಸಿ ಕಂಕನಾಡಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಎಲ್ಲಾ ಕೋಣಗಳನ್ನು ರಕ್ಷಿಸಿ, ಅವುಗಳನ್ನು ಸ್ಥಳೀಯ ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.


