Breaking
15 May 2026, Fri

ವಿಶ್ವ ಅಮ್ಮನ ದಿನಾಚರಣೆ: ತಾಯಿ ದಿನಾಚರಣೆಯನ್ನು ಸರ್ಕಾರವೇ ಆಚರಿಸಲಿ – ಶ್ರೀನಿವಾಸನ್

ಮೈಸೂರು: ಭಾರತ ಮಾತೆಯ ಋಣ ತೀರಿಸುವ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿ ತಾಯಂದಿರ ದಿನಾಚರಣೆಯನ್ನು ಆಚರಿಸಬೇಕು ಎಂದು ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಶ್ವ ಅಮ್ಮನ ದಿನಾಚರಣೆ ಅಂಗವಾಗಿ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ “ಮಾತಾ ವಿಜಯಕುಮಾರಿ ವಿ. ರಾವ್ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

“ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ತಾಯಿಯಿಂದ ಮಾತ್ರ ಸಿಗುತ್ತದೆ. ತಾಯಿಯೇ ಮೊದಲ ಗುರು ಎಂಬುದು ನಿಜವಾದ ಮಾತು. ಭಾರತ ಮಾತೆಯೂ ನಮ್ಮ ತಾಯಿಯೇ ಆಗಿದ್ದು, ತಾಯಿ ದಿನಾಚರಣೆಯನ್ನು ಆಚರಿಸುವುದು ಭಾರತ ಮಾತೆಯನ್ನು ಪೂಜಿಸಿದಂತೆಯೇ,” ಎಂದು ಹೇಳಿದರು.

“ಭೂಮಿ ತಾಯಿಯ ಋಣ ತೀರಿಸಲು ಸರ್ಕಾರವೇ ತಾಯಿ ದಿನಾಚರಣೆಯನ್ನು ಆಚರಿಸುವ ಮೂಲಕ ಜನರಲ್ಲಿ ಮೌಲ್ಯಗಳನ್ನು ಬೆಳೆಸಬೇಕು,” ಎಂದು ಅವರು ಮನವಿ ಮಾಡಿದರು.

ಸಂಸ್ಕೃತ ವಿದುಷಿ ಡಾ. ಕೆ. ಲೀಲಾ ಪ್ರಕಾಶ್ ಮಾತನಾಡಿ, “ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಸೃಷ್ಟಿಸಿದ್ದಾನೆ. ತಾಯಿ ಸಾಮಾನ್ಯಳಲ್ಲ, ಆಕೆ ಭುವನದ ಭಾಗ್ಯ. ಸಾಧಕ ಮಹಿಳೆಯರನ್ನು ಸ್ಮರಿಸಿ ಪ್ರಶಸ್ತಿ ನೀಡುತ್ತಿರುವ ಫೌಂಡೇಶನ್ ಕಾರ್ಯ ಶ್ಲಾಘನೀಯ,” ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಲಕ್ಷ್ಮಿ ಪೆಲಕಂಡ ಹಾಗೂ ವಿದುಷಿ ಎಂ.ಆರ್. ಸುಧಾ ಅವರಿಗೆ “ಮಾತಾ ವಿಜಯಕುಮಾರಿ ವಿ. ರಾವ್ ಪ್ರಶಸ್ತಿ” ಪ್ರದಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಲಯನ್ಸ್ ಸಂಸ್ಥೆಯ ನಿಕಟಪೂರ್ವ ಗವರ್ನರ್ ಲಯನ್ ಎಸ್. ವೆಂಕಟೇಶ್, ಸಂಗೀತ ಶಿಕ್ಷಕಿ ಎಂ.ವಿ. ಅನಿತಾ, ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಕೆ.ಆರ್. ಯೋಗನರಸಿಂಹನ್ ಹಾಗೂ ಫೌಂಡೇಶನ್ ಸಂಸ್ಥಾಪಕ ಎಸ್.ವಿ. ನಾಗೇಂದ್ರ ಬಾಬು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *