ಉಳ್ಳಾಲ: ಉದ್ಯೋಗ ನಿಮಿತ್ತ ಇಸ್ರೇಲ್‌ಗೆ ತೆರಳಬೇಕಿದ್ದ ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯ್ಗೆ ಪ್ರದೇಶದಲ್ಲಿ ಸಂಭವಿಸಿದೆ.
ಮೃತರನ್ನು ದಿ| ಜೆರ್ರಿ ಡಿ’ಸೋಜ ಹಾಗೂ ಇಸಾಬೆಲ್ಲ ದಂಪತಿಯ ಪುತ್ರ ಸೂರ್ಯಪ್ರಕಾಶ್ ಡಿ’ಸೋಜಾ (42) ಎಂದು ಗುರುತಿಸಲಾಗಿದೆ.

ಕಳೆದ ಒಂದು ವರ್ಷದಿಂದ ಇಸ್ರೇಲ್ ದೇಶದಲ್ಲಿ ಉದ್ಯೋಗದಲ್ಲಿದ್ದ ಸೂರ್ಯಪ್ರಕಾಶ್, ಅದೇ ದೇಶದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಸಹೋದರಿಯೊಂದಿಗೆ ಸಹೋದರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಮೇ 17ರಂದು ಅವರು ಮರಳಿ ಇಸ್ರೇಲ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ನಸುಕಿನ ಜಾವ, ತಾನು ಮಲಗಿದ್ದ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಸೂರ್ಯಪ್ರಕಾಶ್ ಪತ್ತೆಯಾಗಿದ್ದಾರೆ. ತಾಯಿ ಕೋಣೆಯೊಳಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಸೂರ್ಯಪ್ರಕಾಶ್ ಅವರಿಗೆ ಕಳೆದ ಕೆಲವು ಸಮಯದಿಂದ ಎದೆನೋವು ಸಂಬಂಧಿತ ಆರೋಗ್ಯ ಸಮಸ್ಯೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆರೋಗ್ಯ ಸಮಸ್ಯೆಯಿಂದ ಮನನೊಂದು ಅವರು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

ಮೃತರು ತಾಯಿ, ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರನನ್ನು ಅಗಲಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


