ಬಂಟ್ವಾಳ: ಕುಡ್ಲ ಕುಲಾಲೆರ್ ಚಾರಿಟೀಬಲ್ ಸೇವಾ ಟ್ರಸ್ಟ್ (ರಿ), ಮಂಗಳೂರು ಇದರ ವತಿಯಿಂದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 618 ಅಂಕ ಗಳಿಸಿ ಸಾಧನೆ ಮಾಡಿದ ಕುಮಾರಿ ದುವಿ ಹಾಗೂ ಕುಮಾರಿ ಕೃಷ್ಮ ಶೆಟ್ಟಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವು ಬಂಟ್ವಾಳದ ಮೊಡಂಕಾಪುವಿನಲ್ಲಿರುವ ಲಕ್ಷ ರೆಸಿಡೆನ್ಸಿಯಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದ ನ್ಯಾಯವಾದಿ ಹಾಗೂ ಸಮಾಜ ಸೇವಕ ರೊ. ಅಶ್ವಿನ್ ಕುಮಾರ್ ರೈ ಅವರು ಮಾತನಾಡಿ, “ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವ ಪ್ರಥಮ ಹಾಗೂ ಪ್ರಮುಖ ಹಂತವಾಗಿದೆ. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿಯರು ಮುಂದೆಯೂ ಚೆನ್ನಾಗಿ ಕಲಿತು, ತಮಗೆ ಇಷ್ಟವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಕೈಬೀಸಿ ಕರೆಯುತ್ತಿವೆ,” ಎಂದು ಹೇಳಿ ಶುಭ ಹಾರೈಸಿದರು.

ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಬೂಡಾ ಮಾಜಿ ಅಧ್ಯಕ್ಷರಾದ ಸದಾಶಿವ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲು ನಮಗೆ ಹೆಮ್ಮೆಯಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಂಡು, ತಾವು ಕಲಿತ ಶಾಲೆಗೆ, ಪೋಷಕರಿಗೆ ಹಾಗೂ ಹುಟ್ಟಿ ಬೆಳೆದ ಊರಿಗೆ ಕೀರ್ತಿ ತರಬೇಕು,” ಎಂದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಜೇಸಿ ಅಧ್ಯಕ್ಷ ಕಿಶೋರ್ ಆಚಾರ್ಯ, ಮಾಜಿ ಪುರಸಭಾ ಸದಸ್ಯೆ ಪ್ರಭಾ ಸಾಲ್ಯಾನ್, ಕಟ್ಟಡದ ಮಾಲಕಿ ಜಯಲಕ್ಷ್ಮಿ ಎಸ್. ಬಂಗೇರ, ಭೋಜ ಸಾಲ್ಯಾನ್ ಹಾಗೂ ಟ್ರಸ್ಟ್ ಸದಸ್ಯರಾದ ದಯಾನಂದ ನೇರಂಬೋಳು, ಜಯರಾಮ ಶೆಟ್ಟಿ ಮೊಡಂಕಾಪು, ನೋವೆಲ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಶೇಷಪ್ಪ ಮಾಸ್ತರ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.







