ಕಾಸರಗೋಡು: ಕಾರ್ಮಿಕನೋರ್ವನ ಕೊಲೆ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಧಾರವಾಡ ನಿವಾಸಿ ಎಚ್. ಮಂಜುನಾಥ್ ಅಲಿಯಾಸ್ ಮಂಜಪ್ಪ (45) ಎಂದು ಗುರುತಿಸಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಗದಗದ ಬಾಲೆಹೊಸೂರು ಮೂಲದ ಚಂದ್ರಶೇಖರ್ ಅಲಿಯಾಸ್ ಸುರೇಶ್ ಪಟ್ಟೋಡ್ (38) ಎಂದು ತಿಳಿದುಬಂದಿದೆ.

ಮಾ. 11 ರಂದು ನಗರದ ಹೊರವಲಯದಲ್ಲಿರುವ ನುಳ್ಳಿಪ್ಪಾಡಿಯಲ್ಲಿರುವ ನಿರ್ಮಾಣ ಸ್ಥಳದಲ್ಲಿ ಸುರೇಶ್ ಪಟ್ಟೋಡ್ ಅವರು ಕೆಲಸ ಮಾಡುತಿದ್ದರು. ಈ ವೇಳೆ ಮಂಜುನಾಥ್ ಅಲಿಯಾಸ್ ಮಂಜಪ್ಪ ಅವರು ಆತನನ್ನು ಕೊಲೆ ಮಾಡಿದ್ದಾರೆ. ನಂತರ ಕಟ್ಟಡದಲ್ಲಿ ಲಿಫ್ಟ್‌ಗಾಗಿ ಅಗೆದ ಗುಂಡಿಯಲ್ಲಿ ಕೊಲೆಯಾದ ಶವ ಪತ್ತೆಯಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ 2,000 ರೂ. ಸಾಲದ ವಿಚಾರದಲ್ಲಿ ಉಂಟಾದ ಜಗಳ ಕೊಲೆಗೆ ಕಾರಣ ಎಂದು ಹೇಳಿದ್ದಾನೆ. ಸಾಲ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಕುಡಿದ ಮತ್ತಿನಲ್ಲಿ ಸುರೇಶ್ ಮೇಲೆ ಹಲ್ಲೆ ನಡೆಸಿದ್ದಾಗಿ ಮಂಜಪ್ಪ ಒಪ್ಪಿಕೊಂಡಿದ್ದಾನೆ.


