ಮಂಗಳೂರು: ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಇಂದು (ಏ. 14) ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಪದವಿನಂಗಡಿಯಲ್ಲಿ ‘ನವ್ಯ ಸ್ಟುಡಿಯೋ’ ನಡೆಸುತ್ತಿದ್ದ ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ.

ಏ. 11 ರಂದು ನಂತೂರ್ ಪಂಪ್ ವೆಲ್ ಸಮೀಪದಲ್ಲಿ ಮೋಹನ್ ಅವರ ಸ್ಕೂಟರ್ ಗೋಪಾಲ್ ಎಂಬವರ ಬೈಕ್ ಗೆ ಡಿಕ್ಕಿಯಾಗಿದ್ದು ಪರಿಣಾಮ ರಸ್ತೆಗೆ ಬಿದ್ದ ಗೋಪಾಲ್ ಅವರ ಮೇಲೆ ಟಿಪ್ಪರ್ ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳೆ ಮೋಹನ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮಂಗಳೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



