ಬಂಟ್ವಾಳ: ಕಳೆದ ಮೂರು ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ಆಟಿಸಂ ಮಕ್ಕಳ ತರಬೇತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಿ ಸಿ ರೋಡಿನ ವಿಕಾಸಂ ಸೇವಾ ಫೌಂಡೇಶನ್ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಹಾಗೂ ಸಕ್ಷಮ ದಕ್ಷಿಣ ಕನ್ನಡ ಇವರ ಸಹಯೋಗದೊಂದಿಗೆ ಏ. 02 ರಂದು ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಲಿರುವ ಈ ಕಾರ್ಯಕ್ರಮವನ್ನು ಶ್ರೀ ಮಹಾಬಲ ಕೊಟ್ಟಾರಿ , ಎಂ ಎಂ ಕನ್ಸ್ಟ್ರಕ್ಷನ್ ಹಾಗೂ ಅಧ್ಯಕ್ಷರು , ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ಇವರು ಉದ್ಘಾಟಿಸಲಿದ್ದಾರೆ.

ಯೇನಪೋಯ ಡೆಂಟಲ್ ಕಾಲೇಜಿನ ಡೀನ್ ಹಾಗೂ ಡೆಂಟಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಡಾ ಶ್ಯಾಮ್ ಎಸ್ ಭಟ್, ಎಂಡಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್, ಶುಭ ಗ್ರೂಪ್ ಇದರ ಮಾಲಕರಾದ ಭುವನೇಶ್ ಪಚ್ಚಿನಡ್ಕ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ವಚನ್ ಶೆಟ್ಟಿ , ಸಕ್ಷಮ ದ.ಕ ಜಿಲ್ಲಾಧ್ಯಕ್ಷರಾದ ರಾಜಶೇಖರ ಭಟ್ ಕಾಕುಂಜೆ , ಅನಿಲ್ ಪಂಡಿತ್, ಕೃಷ್ಣಾರಾಧ್ಯಂ, ಉಪಾಧ್ಯಕ್ಷರು, ಸಂಸ್ಕಾರ ಭಾರತಿ, ದ.ಕ. ಜಿಲ್ಲೆ ಇವರು ಈ ಕಾರ್ಯಕ್ರದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ ಲಯನ್ ರೋಹಿತಾಶ್ವ, ಅಧ್ಯಕ್ಷರು, ಲಯನ್ಸ್ ಕ್ಲಬ್ ಬಂಟ್ವಾಳ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ‘ಆಟಿಸಂ- ವರ್ತಮಾನ ಹಾಗೂ ಭವಿಷ್ಯ’ ಎನ್ನುವ ವಿಷಯದ ಕುರಿತು ವಿಚಾರ ಸಂಕಿರಣ ಜರಗಲಿದೆ.
ಈ ವಿಚಾರಸಂಕಿರಣದಲ್ಲಿ ಯೇನಪೋಯ ಡೆಂಟಲ್ ಕಾಲೇಜಿನ ಡೀನ್ ಹಾಗೂ ಡೆಂಟಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಡಾ ಶ್ಯಾಮ್ ಎಸ್ ಭಟ್, ಎಂಡಿಎಸ್ ಹಾಗೂ ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕ ಹಾಗೂ ಸಿ ಇ ಓ ಗಣೇಶ್ ಭಟ್ ವಾರಣಾಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ.

ವಿಕಾಸಂ ಸೇವಾ ಫೌಂಡೇಶನ್ ನ ಸಹ ಸಂಸ್ಥಾಪಕರಾದ ಗೋಪಾಲ್ ಗೋವಿಂತೋಟ, ಗಣೇಶ್ ಭಟ್ ವಾರಣಾಸಿ, ಧರ್ಮಪ್ರಸಾದ ರೈ, ಹರೀಶ್ ಜೋಗಿ ಹಾಗೂ ಸಂಸ್ಥೆಯ ತರಬೇತುದಾರರು ಹಾಗೂ ಅಧ್ಯಾಪಕರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿ ಸಾರ್ವಜನಿಕರು ಆಟಿಸಂ ಸಮಸ್ಯೆಯ ಆಳದ ಕುರಿತು ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಎ. 2 ತಾರೀಕನ್ನು ವಿಶ್ವ ಆಟಿಸಂ ಜಾಗೃತಿ ದಿನಾಚರಣೆಯನ್ನಾಗಿ ಗುರುತಿಸಲಾಗುತ್ತದೆ. ಆಟಿಸಂ ಒಂದು ವೈಕಲ್ಯವಾಗಿದ್ದು ಇತ್ತೀಚೆಗಿನ ವರ್ಷಗಳಲ್ಲಿ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಎನ್ನುವ ದಿವ್ಯಾಂಗತೆಯ ಪ್ರಮಾಣವು ತೀವ್ರವಾಗಿ ಹೆಚ್ಚುತ್ತಿರುವುದು ಬಹಳ ಆತಂಕಕಾರೀ ವಿಷಯವಾಗಿದೆ. ಭಾರತದಲ್ಲಿ ಈಗ ಜನಿಸುತ್ತಿರುವ ಪ್ರತೀ 68 ಮಕ್ಕಳಲ್ಲಿ ಒಂದು ಮಗುವು ಆಟಿಸಂ ಲಕ್ಷಣವನ್ನು ಹೊಂದಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಅಮೇರಿಕದಲ್ಲಿ ಪ್ರತೀ 31 ಮಕ್ಕಳಲ್ಲಿ ಒಂದು ಮಗು ಆಟಿಸಂ ಲಕ್ಷಣವನ್ನು ಹೊಂದಿದೆ. ಇತರ ದೇಶಗಳಂತೆಯೇ ಭಾರತಲ್ಲೂ ಪ್ರತೀ ವರ್ಷ ಮಕ್ಕಳಲ್ಲಿ ಆಟಿಸಂ ಪ್ರಮಾಣ ಹೆಚ್ಚುತ್ತಿದೆ. ಇದೀಗ ಭಾರತದಲ್ಲಿ 1.8 ಕೋಟಿ ಮಂದಿ ಆಟಿಸಂ ಅನ್ನು ಹೊಂದಿದ್ದಾರೆ.


