Breaking
1 Apr 2026, Wed

ದೈವ ನಂಬಿಕೆ ಉಳಿಸಲು ಭಕ್ತರ ಸಂಕಲ್ಪ: ಸಿದ್ದಕಟ್ಟೆ- ಕಲ್ಕೂರಿಪದವು ಕೊಡಮಣಿತ್ತಾಯ ಸೇವಾ ಟ್ರಸ್ಟ್ ಗೆ ಸಹಕಾರ ಕೋರಿಕೆ

ಬಂಟ್ವಾಳ: ಪೀಳಿಗೆಯಿಂದ ಪೀಳಿಗೆಗೆ ಸಾಗಿದ ದೈವ ನಂಬಿಕೆ, ಭಕ್ತಿ ಮತ್ತು ಸಂಪ್ರದಾಯ. ಇಂದು ಅದೇ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಭಕ್ತರ ಮುಂದೆ ನಿಂತಿದೆ. ವರ್ಷಗಳಿಂದ ದೈವ ಕೃಪೆಗೆ ಪಾತ್ರವಾಗಿರುವ ಪವಿತ್ರ ಗಡು ಸ್ಥಳವನ್ನು ಕಾಪಾಡಿಕೊಳ್ಳಲು ಈಗ ಸಮಯದ ವಿರುದ್ಧದ ಹೋರಾಟ ಆರಂಭವಾಗಿದೆ.

ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕಣಿಯೂರು–ಕಲ್ಕೂರಿಪದವಿನಲ್ಲಿ ನೆಲೆಸಿರುವ ಶ್ರೀ ಕೊಡಮಣಿತ್ತಾಯ ಸೇವಾ ಟ್ರಸ್ಟ್, ದೈವೀ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಗಡು ಹಾಕಿದ ಪವಿತ್ರ ಭೂಮಿಯನ್ನು ಖರೀದಿಸಲು ಮುಂದಾಗಿದ್ದು, ಇದಕ್ಕಾಗಿ ಸುಮಾರು 47 ಲಕ್ಷ ರೂ. ವೆಚ್ಚವಾಗಲಿದೆ.

ಎಲಿಯ ಮಾಗಣೆಯ ರಾಜನ್ ದೈವ ಶ್ರೀ ಕೊಡಮಣಿತ್ತಾಯ ದೈವವು ಐದು ಗ್ರಾಮಗಳ ಭಕ್ತರ ಆರಾಧ್ಯ ದೈವವಾಗಿದ್ದು, ಕಳೆದ 65 ವರ್ಷಗಳಿಂದ ಇಲ್ಲಿ ಆರಾಧನೆ ನಡೆಯುತ್ತಾ ಬಂದಿದೆ. ಭಕ್ತರ ನಂಬಿಕೆ, ಭಕ್ತಿ ಮತ್ತು ದೈವದ ಅನುಗ್ರಹ ಈ ಸ್ಥಳಕ್ಕೆ ವಿಶೇಷ ಮಹತ್ವ ನೀಡಿವೆ.

ಇತ್ತೀಚೆಗೆ ಗಡು ಸ್ಥಳದ ಹತ್ತಿರದ ಸುಮಾರು 0.27 ಸೆಂಟ್ಸ್ ವಿಸ್ತೀರ್ಣದ ಭೂಮಿ ಮಾರಾಟಕ್ಕೆ ಬಂದಿರುವುದು ಟ್ರಸ್ಟ್ ಗಮನಕ್ಕೆ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಈ ಜಾಗ ಅನ್ಯ ಧರ್ಮೀಯರ ಹೆಸರಿನಲ್ಲಿದ್ದು, ಇದೀಗ ಮಾರಾಟಕ್ಕೆ ಬಂದ ಹಿನ್ನೆಲೆಯಲ್ಲಿ, ಭವಿಷ್ಯದ ದೈವೀ ಕಾರ್ಯಕ್ರಮಗಳಿಗೆ ಈ ಜಾಗ ಅತ್ಯಂತ ಅಗತ್ಯವೆಂದು ಪರಿಗಣಿಸಿ ಖರೀದಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಟ್ರಸ್ಟ್ ಹಾಗೂ ಭಕ್ತರಿಂದ ಒಟ್ಟು ಸುಮಾರು 31 ಲಕ್ಷ ರೂ. ಸಂಗ್ರಹವಾಗಿದ್ದು, ಇದರಲ್ಲಿ ಕಲ್ಲೂರಿ ಕೊಡಮಣಿತ್ತಾಯ ಸೇವಾ ವೃಂದ ಯಕ್ಷಗಾನ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ಹಾಗೂ ಕಣಿಯೂರು ಗ್ರಾಮಸ್ಥರಿಂದ ನೇಮ ಸಂದರ್ಭ ಸಂಗ್ರಹವಾದ 6 ಲಕ್ಷ ರೂ. ಸೇರಿವೆ. ಆದಾಗ್ಯೂ, ಇನ್ನೂ ಸುಮಾರು 15 ಲಕ್ಷ ರೂ. ಅಗತ್ಯವಿದ್ದು, ಜೂನ್ 15ರೊಳಗೆ ಈ ಮೊತ್ತ ಪಾವತಿಸಬೇಕಾಗಿದೆ.

“ಈ ಜಾಗವನ್ನು ಈಗ ಕಾಪಾಡಿಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅದನ್ನು ಮರಳಿ ಪಡೆಯುವುದು ಅಸಾಧ್ಯವಾಗಬಹುದು. ದೈವ ನಂಬಿಕೆ ಮತ್ತು ಹಿಂದೂ ಸಂಪ್ರದಾಯವನ್ನು ಉಳಿಸಲು ಭಕ್ತರು ತನು, ಮನ, ಧನಗಳಿಂದ ಸಹಕರಿಸಬೇಕು,” ಎಂದು ಟ್ರಸ್ಟ್ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ದೈವ ನಂಬಿಕೆ ಉಳಿಸುವ ಈ ಹೋರಾಟದಲ್ಲಿ ಭಕ್ತರ ಕೈಜೋಡಿಕೆ ಈಗ ಕಾಲದ ಅವಶ್ಯಕತೆಯಾಗಿದೆ.

Leave a Reply

Your email address will not be published. Required fields are marked *