ಉಡುಪಿ: ಆಂಧ್ರ ಪ್ರದೇಶ ಮೂಲದ ವಲಸಿಗ ಮಹಿಳೆಯೊಬ್ಬರು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಿಂದ ಶ್ರೀ ಮಂದಾರ್ತಿ ಕ್ಷೇತ್ರದಲ್ಲಿ,ಅನ್ನದಾನ ಮತ್ತು ವಸ್ತ್ರದಾನ ಮಾಡಲು ಮುಂದಾಗಿರುವ ಅಪರೂಪದ ಘಟನೆ ಗಮನಸೆಳೆಯುತ್ತಿದೆ.

ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅನ್ನದಾನ ಮತ್ತು ವಸ್ತ್ರದಾನ ಮಾಡುವ ಸಂಕಲ್ಪ ಕೈಗೊಂಡಿರುವ ಈ ಮಹಿಳೆಯನ್ನು ಅಶ್ವಥಮ್ಮ ಎಂದು ಗುರುತಿಸಲಾಗಿದೆ. ಅವರು ಆಂಧ್ರ ಮೂಲದಿಂದ ವಲಸೆ ಬಂದ ರಂಗಭೂಮಿ ಕಲಾವಿದರ ಕುಟುಂಬಕ್ಕೆ ಸೇರಿದ್ದವರಾಗಿದ್ದಾರೆ.
ತಮಗೆ ಸ್ವಂತ ಮಕ್ಕಳು ಇಲ್ಲದಿದ್ದರೂ, ಮೂವರು ಹೆಣ್ಣುಮಕ್ಕಳನ್ನು ದತ್ತು ಪಡೆದು ಅವರಿಗೆ ವಿದ್ಯಾಭ್ಯಾಸ ನೀಡಿ, ವಿವಾಹ ಮಾಡಿ ಜೀವನದಲ್ಲಿ ನೆಲೆನಿಂತಂತೆ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ವಿವಿಧ ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡಿ ಚಿಲ್ಲರೆ ಹಣವನ್ನು ಸಂಗ್ರಹಿಸುತ್ತಿರುವ ಅಶ್ವಥಮ್ಮ, ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಸಮೀಪದ ನಿರ್ದಿಷ್ಟ ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ದಿನವೂ ವಿಭಿನ್ನ ದೇವಸ್ಥಾನಗಳ ಮುಂದೆ ಕುಳಿತು ಸಂಗ್ರಹಿಸಿದ ಬಳಿಕ ತಮ್ಮ ಊರಿಗೆ ತೆರಳಿ, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ.

ಈ ಸೇವಾ ಮನೋಭಾವದ ಭಾಗವಾಗಿ, ಬರುವ ಏಪ್ರಿಲ್ 29ರಂದು ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅನ್ನದಾನ ಮತ್ತು ವಸ್ತ್ರದಾನ ಕಾರ್ಯಕ್ರಮವನ್ನು ಆಯೋಜಿಸಲು ಅವರು ಸಂಕಲ್ಪ ಮಾಡಿದ್ದಾರೆ.

ಇದಕ್ಕೂ ಮೊದಲು ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂ, ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಒಂದು ಲಕ್ಷ ರೂ, ಶಬರಿಮಲೆ ಪಂಪಾ ಕ್ಷೇತ್ರದಲ್ಲಿ ಅನ್ನದಾನ ಹಾಗೂ ಕಂಚುಗೋಡು ದೇವಸ್ಥಾನಕ್ಕೂ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಪ್ರತಿ ವರ್ಷವೂ ಅವರು ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುವುದು ವಿಶೇಷವಾಗಿದೆ.




