ಮಂಗಳೂರು: ಕೋಮು ಪ್ರಚೋದನಾತ್ಮಕ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಯುವಕನೊಬ್ಬನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ನಿವಾಸಿ ಪವನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.

ಸುಹಾಸ್ ಶೆಟ್ಟಿಯ ಕೊಲೆಯ ನಂತರ ‘TN-MADDY’ ಎಂಬ ಖಾತೆಯ ಮೂಲಕ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಆರೋಪಿ ಪವನ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.





