Breaking
25 Sep 2026, Fri

ಸಜೀಪ ಮಾಗಣೆ ಪಡೇರಮಾಡದಲ್ಲಿ ನೇಮೋತ್ಸವ ಸಂಪನ್ನ: ಭಕ್ತಿ ಸಂಭ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು

ಬಂಟ್ವಾಳ: ಸಜೀಪ ಮಾಗಣೆ ಪಡೇರಮಾಡ ಕ್ಷೇತ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ದೈವಂಗಳು ಹಾಗೂ ಶ್ರೀ ನಾಲ್ಕೈತ್ತಾಯ ದೈವದ ನೇಮೋತ್ಸವದ ಅಂಗವಾಗಿ, ಪೂರ್ವಶಿಷ್ಟ ಸಂಪ್ರದಾಯದಂತೆ ಕಾಂತಡಿ ಗುತ್ತುವಿನಿಂದ ಸಂಕೇಶ ಬಂಡಾರದ ಮನೆಗೆ ತೆರಳಿ, ಶ್ರೀ ದೈವಗಳ ಕಿರುವಾಳು ಮತ್ತು ಆಭರಣಗಳನ್ನು ವಾದ್ಯ, ಬ್ಯಾಂಡ್, ಕೊಂಬು ಸೇರಿದಂತೆ ಸಕಲ ಬಿರುದಾವಳಿಗಳೊಂದಿಗೆ ರಜತ ಪಲ್ಲಕ್ಕಿಯಲ್ಲಿ ಸುಮಾರು ಆರು ಕಿಲೋಮೀಟರ್ ಕಾಲನಡಿಗೆಯಲ್ಲಿ ಇಡೀ ರಾತ್ರಿ ಸಾಗಿಸಿ ಕಲ್ಲಾಡಿಗೋಳಿ, ದೇರಾಜೆ, ಸಜೀಪ ಪೇಟೆ ಮಾರ್ಗವಾಗಿ ತರಲಾಯಿತು.

ಸಂಪ್ರದಾಯದ ಪ್ರಕಾರ ಮಾರ್ಗ ಮಧ್ಯೆ ಹೃದಯ ಭಾಗದಲ್ಲಿರುವ ರಾಮ, ಲಕ್ಷ್ಮಣ, ಮಾಡದಾರು ಎಂಬ ಐದು ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ, ಬಳಿಕ ಪಡೇರಮಾಡ ಕ್ಷೇತ್ರಕ್ಕೆ ತಲುಪಿ ಧ್ವಜಾರೋಹಣದೊಂದಿಗೆ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಕಾಂತಡಿ ಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯಕ್, ಬಿಜಂದಾರು ಗುತ್ತಿನ ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರೀಗುತ್ತಿನ ವಿವೇಕ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಡುರಾತ್ರಿ ವೇಳೆಯಲ್ಲಿಯೂ ಮುಸ್ಲಿಂ ಸಮುದಾಯದವರೂ ಸೇರಿದಂತೆ ಸಾವಿರಾರು ಭಕ್ತರು ಕಟ್ಟೆ ಪೂಜೆ ಹಾಗೂ ಭೇಟಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *