ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

ಮಂಗಳೂರು: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಕೇಂದ್ರ ಮಂಡಳಿ ಮತ್ತು ಬೆಂದೂರು ಕಾನ್ಫರೆನ್ಸ್‌ನ ಸಹಯೋಗದೊಂದಿಗೆ 2026ರ ಮಾ. 22 ರಂದು ಬೆಂದೂರು ಚರ್ಚ್ ಸಭಾಂಗಣದಲ್ಲಿ ಅರ್ಥಪೂರ್ಣ ಸಂವಾದಾತ್ಮಕ ವಿಚಾರ ಸಂಕಿರಣವು ನಡೆಯಿತು.

ಬೆಳಿಗ್ಗೆ 10:30ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ಈ ವಿಚಾರ ಸಂಕಿರಣದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಆವೆ ಮರಿಯಾ ಪಾಲಿಯೇಟಿವ್ ಕೇರ್ ಸೆಂಟರ್‌ನ ಡಾ. ಲವೀನಾ ನೊರೊನ್ಹಾ ಅವರು ಮಾತನಾಡಿ, “ನಾವು ನೀಡುವವರಲ್ಲ, ಬದಲಿಗೆ ಸೇವೆ ಮಾಡಲು ಆಶೀರ್ವದಿಸಲ್ಪಟ್ಟವರು” ಎಂಬ ವಿಷಯದ ಕುರಿತು ಮಾತನಾಡುತ್ತಾ, ಬಡವರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ಔಚಿತ್ಯವನ್ನು ವಿವರಿಸಿದರು. ತಮ್ಮ 36 ವರ್ಷಗಳ ಸೇವಾವಧಿಯ ನೈಜ ಅನುಭವಗಳನ್ನು ಹಂಚಿಕೊಂಡ ಅವರು, ನಿಜವಾದ ಅಗತ್ಯಗಳನ್ನು ಗುರುತಿಸಿ ಸಹಾಯ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಅತಿಥಿ, ಖ್ಯಾತ ಉದ್ಯಮಿ ಜೋಸೆಫ್ ಮಿನೇಜಸ್ ಅವರು “ಗೌರವಯುತ ವೃದ್ಧಾಪ್ಯ ಬದುಕು ಮತ್ತು ದಾನವನ್ನು ಕಲಿಯಿರಿ” ಎಂಬ ವಿಷಯದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಆರ್ಥಿಕ ಭದ್ರತೆ, ಶಿಸ್ತಿನ ಉಳಿತಾಯ ಮತ್ತು ದೀರ್ಘಕಾಲದ ಆರ್ಥಿಕ ಯೋಜನೆಯು ವೃದ್ಧಾಪ್ಯದಲ್ಲಿ ಹೇಗೆ ಘನತೆಯ ಜೀವನಕ್ಕೆ ಸಹಕಾರಿಯಾಗುತ್ತದೆ ಎಂಬ ಬಗ್ಗೆ ಅವರು ಉಪಯುಕ್ತ ಮಾಹಿತಿ ನೀಡಿದರು.

ಮಂಗಳೂರು ಕೇಂದ್ರ ಮಂಡಳಿಯ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫಾದರ್ ಫ್ಲೇವಿಯನ್ ಲೋಬೊ ಅವರು ಪ್ರಾರ್ಥನೆ ಹಾಡಿದರು. ಜ್ಯೊ ಕುವೆಲ್ಹೊ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಂದೂರು ಕಾನ್ಫರೆನ್ಸ್‌ನ ಫ್ಲೇವಿ ಲೋಬೊ ಅವರು ವಂದಿಸಿದರು. ವಂದನೀಯ ಫಾದರ್ ಫ್ಲೇವಿಯನ್ ಲೋಬೊ ಅವರು ಆಶೀರ್ವದಿಸಿದ ಪ್ರೀತಿ-ವಿಶ್ವಾಸದ ಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Leave a Reply

Your email address will not be published. Required fields are marked *