ಬೆಳ್ತಂಗಡಿ: ಬೈಕ್ ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜೊತೆಗೆ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ಸವಾರನನ್ನು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ನವಾಜ್ (19) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ಸಂತೆಕಟ್ಟೆ ಬಳಿ ನವಾಜ್ ಬೈಕ್ ಚಲಾಯಿಸುತ್ತಿದ್ದ ವೇಳೆ ಬೆಳ್ತಂಗಡಿ ಸಂಚಾರಿ ಉಪನಿರೀಕ್ಷಕರು ವಾಹನವನ್ನು ತಡೆದು ತಪಾಸಣೆ ನಡೆಸಿದರು. ಈ ವೇಳೆ ಬೈಕ್‌ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ತಪಾಸಣೆಯ ವೇಳೆ ಆತ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತನ್ನು ನೋಡಿ, ವಾಹನದ ನೋಂದಣಿ ಮತ್ತು ದಾಖಲೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಹಣ ಪಾವತಿಸಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







