ಮಂಗಳೂರು: ಸ್ನೇಹಿತನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ವಂಚನೆ ನಡೆಸಿದ ಆರು ಆರೋಪಿಗಳನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (27) ಮತ್ತು ಉತ್ಪಲ ಸಂತೋಷ್ ಕೃಷ್ಣ (35), ಕರ್ನೂಲಿನ ಬುಡಿದಿನ್ನೆ ವಂಶಿ ಯಾನೆ ಗುರು (21), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬುಡೆ ಶ್ರೀನಿವಾಸ (38) ಮತ್ತು ಮುಲ್ಕಿಯ ಇಬ್ರಾಹೀಂ (35) ಎಂದು ಗುರುತಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಆಕರ್ಷಕ ಜಾಹೀರಾತುಗಳನ್ನು ನೀಡಿ ಬ್ಯಾಂಕ್ ಖಾತೆದಾರರಿಂದ ಖಾತೆಯ ಸಂಪೂರ್ಣ ವಿವರಗಳನ್ನು ಪಡೆದು, ಓಟಿಪಿ ಸಂಗ್ರಹಿಸಿ ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಹೈದರಾಬಾದ್‌ನಲ್ಲಿ ಸೈಬರ್ ವಂಚನೆ ತಂಡ ಕಾರ್ಯನಿರ್ವಹಿಸುತ್ತಿದ್ದದ್ದು ತಿಳಿದುಬಂದಿದೆ.

ಸೈಬರ್ ಅಪರಾಧ ಪೊಲೀಸ್ ತಂಡ ಹೈದರಾಬಾದ್‌ಗೆ ತೆರಳಿ ಐವರನ್ನು ಅಲ್ಲೇ ಬಂಧಿಸಿದ್ದು, ಓರ್ವ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 18 ಮೊಬೈಲ್, 1 ಲ್ಯಾಪ್‌ಟಾಪ್, 12 ಸಿಮ್‌ಕಾರ್ಡ್, 15 ಚೆಕ್‌ಬುಕ್, 12 ಬ್ಯಾಂಕ್ ಪಾಸ್‌ಬುಕ್, 18 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.










