ಬೆಂಗಳೂರು: ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ಪರ್ಫ್ಯೂಮ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ಮಾಕಳಿ ಗ್ರಾಮದ ಲೋಕೇಶ್ ಅವರಿಗೆ ಸೇರಿದ ಈ ಗೋದಾಮುಗಳಲ್ಲಿ ಏಸಿ, ಫ್ರಿಡ್ಜ್, ಪರ್ಫ್ಯೂಮ್ ಹಾಗೂ ಪೆಡಿಗ್ರಿ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ, ಮೂರು ಖಾಸಗಿ ಕಂಪನಿಗಳಿಗೆ ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ.

ಮೊದಲು ಪರ್ಫ್ಯೂಮ್ ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಗ್ಯಾಸ್ ಸ್ಫೋಟ ಸಂಭವಿಸಿ ಪಕ್ಕದ ಗೋದಾಮಿಗೂ ಅಗ್ನಿ ವ್ಯಾಪಿಸಿದೆ. ಗೋದಾಮಿನ ಪಕ್ಕದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಕೂಡ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿವೆ.

ಘಟನೆಯ ವೇಳೆ ಗೋದಾಮಿನಲ್ಲಿ ಸುಮಾರು 40 ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಹೊರಗೆ ಓಡಿ ಪಾರಾಗಿದ್ದಾರೆ. ಈ ವೇಳೆ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.






