ತುಮಕೂರು: ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಹೃದಯಾಘಾತದಿಂದ ಮೃತಪಟ್ಟಿರೋದಾಗಿ ಎಲ್ಲರನ್ನೂ ನಂಬಿಸಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿಹಳ್ಳಿ ಎಂಬಲ್ಲಿ ನಡೆದಿದೆ.

ಜಯಲಕ್ಷ್ಮೀ ಮೃತ ಮಹಿಳೆಯಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಯ ಸಹೋದರಿಯಾದ ಅನುಸೂಯಾ ಮತ್ತು ಸಾಕು ಮಗ ಚಂದ್ರಶೇಖರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಜಯಲಕ್ಷ್ಮೀ ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದರು. ಬಳಿಕ ಗಂಡ ಮಾಡುತ್ತಿದ್ದ ಸರಕಾರಿ ಕೆಲಸ ಇವರಿಗೆ ಸಿಕ್ಕಿದ್ದು ತುರುವೇಕೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಎಫ್ ಡಿಎ ಆಗಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು.

ಈ ನಡುವೆ ಪರಿಚಯವಾದ ಶ್ರೀನಿವಾಸ್ ಎಂಬಾತ ಜೊತೆಗೆ ಆತ್ಮೀಯತೆ ಬೆಳೆದಿತ್ತು. ಆತನೊಂದಿಗೆ ಪ್ರತ್ಯೇಕವಾಗಿ ಬಾಳುವ ಆಸೆಯನ್ನು ಜಯಲಕ್ಷ್ಮೀ ಕಂಡಿದ್ದರು. ಆದರೆ ಅದೇನಾಯ್ತೋ ಇದ್ದಕಿದ್ದಂತೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಗೆಳೆಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ಧೇ ತಡ, ಸಾವಿನ ಕೇಸ್ ಗೆ ಸ್ಪೋಟಕ ತಿರುವು ಸಿಕ್ಕಿದೆ.

ಈ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಅಂತ್ಯಕ್ರಿಯೆಗೆ ಸಿದ್ಧಗೊಂಡಿದ್ದ ಶವವನ್ನು ಮರಣೊತ್ತರ ಪರಿಕ್ಷೆಗೆ ರವಾನೆ ಮಾಡಿದ್ದಾರೆ. ಬಳಿಕ ಆಕೆಯ ಜೊತೆ ವಾಸವಿದ್ದ ಸಾಕು ಮಗ ಚಂದ್ರಶೇಖರ್ ಹಾಗೂ ತಂಗಿ ಅನುಸೂಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಡರಾತ್ರಿ ಉಸಿರುಗಟ್ಟಿಸಿ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ಇದರ ನಡುವೆ ಮಕ್ಕಳಿಲ್ಲದ ಕಾರಣಕ್ಕೆ ಜಯಲಕ್ಷ್ಮೀ ತನ್ನ ಸಹೋದರಿ ಅನುಸೂಯಾ ಮಗ ಚಂದ್ರಶೇಖರ್ ನ ದತ್ತು ಪಡೆದುಕೊಂಡು ಸಾಕಿಕೊಂಡಿದ್ದಳು. ಇನ್ನು ತುಮಕೂರಿನಲ್ಲಿ ವಾಸವಾಗಿದ್ದ ಅನುಸೂಯಾ ಹಾಗೂ ಚಂದ್ರಶೇಖರ್ ಕಳೆದ ಎಂಟು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯ ಜಯಲಕ್ಷ್ಮೀ ನಿವಾಸಕ್ಕೆ ಬಂದಿದ್ದರು.

ಈ ವೇಳೆ ಶ್ರೀನಿವಾಸ್ ಗೆ ಒತ್ತಡ ಹಾಕಿದ್ದ ಆರೋಪಿಗಳು ಆತ ಮನೆ ಬಿಡುವಂತೆ ಮಾಡಿದ್ದರು. ಇಷ್ಟೆಲ್ಲ ನಡೆದ ಬಳಿಕ ಜಯಲಕ್ಷ್ಮೀ ತುರುವೆಕೆರೆಯಲ್ಲಿ ಮನೆ ಮಾಡಲು ನಿರ್ಧರಿಸಿದ್ದು, ಅದರಂತೆ ಬಾಡಿಗೆ ಮನೆಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಈಕೆ ಮನೆ ತೊರೆಯುತ್ತಿರುವ ವಿಚಾರ ತಿಳಿದ ಅನುಸೂಯಾ ಮತ್ತು ಚಂದ್ರಶೇಖರ್ ಉಸಿರುಗಟ್ಟಿಸಿ ಕೊಲೆಗೈದಿರೋದು ತನಿಖೆ ವೇಳೆ ಗೊತ್ತಾಗಿದೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಕೊಲೆಗೆ ಆರ್ಥಿಕ ಹಾಗೂ ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಕಾರಣ ಎಂಬ ಅನುಮಾನ ಮೂಡಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



