Breaking
13 Feb 2026, Fri

‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಶೈಕ್ಷಣಿಕ ಕ್ಷೇತ್ರಗಳಿಗೆ ಮನವಿ

ಬಂಟ್ವಾಳ: ಫೆ.14ರಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಶೈಕ್ಷಣಿಕ ಕ್ಷೇತ್ರಗಳಿಗೆ ಮನವಿ ನೀಡಲಾಗಿದೆ.

‘ವ್ಯಾಲೆಂಟೈನ್ ಡೇ’ ಆಚರಿಸುವ ಪಾಶ್ಚಾತ್ಯರ ಕೆಟ್ಟ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಇದರ ಪರಿಣಾಮವಾಗಿ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯತ್ತ ಸಾಗುತ್ತಿದೆ. ಈ ಕಾರಣಕ್ಕೆ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಶ್ರೀ ಹರ್ಷೇಂದ್ರ ಶೆಟ್ಟಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ವಿದ್ಯಾಸಂಸ್ಥೆಗಳ ಆವರಣದಲ್ಲಿಯೂ ನಡೆಯುವ ಅನಾಚಾರಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ಡಿ. ಮಂಚಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಚಂದ್ರ ಅವರಿಗೂ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.

ಪೊಲೀಸ್ ಇಲಾಖೆಗೂ ಮನವಿ ನೀಡಿ ನಗರದಲ್ಲಿ ವಿಶೇಷ ಪೊಲೀಸ್ ಪಥಕ ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ‘ವಿಶೇಷ ಹೆಲ್ಪ್‌ಲೈನ್ ನಂಬರ್ ಅನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಕೋರಲಾಗಿದೆ.

ಈ ಸಂದರ್ಭದಲ್ಲಿ ಉದ್ಯಮಿ ಸೋಮನಾಥ್ ಸಾಲ್ಯಾನ್, ಸಮಿತಿಯ ಪರವಾಗಿ ನಾರಾಯಣ ಅಮೀನ್, ಯೋಗೀಶ್ ಹಾಗೂ ಗಿರೀಶ್ ಹೆಗ್ಡೆ, ಸುರೇಶ್ ರೈ, ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ಪ್ರಖಂಡ ಉಪಾಧ್ಯಕ್ಷರಾದ ಕೇಶವ ದೈಫಲ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನಾರಾಯಣ ಬಂಟ್ವಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *