Breaking
10 May 2026, Sun

ಲಕ್ಕುಂಡಿ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದ್ದು ನಿಧಿಯಲ್ಲ ಹಿರಿಯರು ಕೂಡಿಟ್ಟ ಆಸ್ತಿ?!

ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾದ ಬೆಲೆಬಾಳುವ ಆಭರಣಗಳು ಐತಿಹಾಸಿಕ ನಿಧಿಯಲ್ಲ ಅದು ಹಿರಿಯರು ಅಡುಗೆ ಮನೆಯಲ್ಲಿ ಕೂಡಿಟ್ಟ ಆಸ್ತಿ ಎಂದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ್ ಮೂಲಿಮನಿಯ ಮಾಹಿತಿ ನೀಡಿದ್ದು ಇದು ಭೂಗತ ನಿಧಿಯಲ್ಲ. ಹಿಂದೆ ಬ್ಯಾಂಕ್ ಅಥವಾ ಟ್ರೆಜರಿ ವ್ಯವಸ್ಥೆ ಇಲ್ಲದ ಕಾಲದಲ್ಲಿ, ಜನರು ತಮ್ಮ ಬೆಲೆಬಾಳುವ ವಸ್ತುಗಳನ್ನು ಮನೆಯ ಅಡುಗೆ ಕೋಣೆಯ ಮೂಲೆ ಅಥವಾ ಒಲೆಯ ಬಳಿ ಹೂತಿಡುವುದು ವಾಡಿಕೆಯಾಗಿತ್ತು. ಈಗ ಸಿಕ್ಕಿರುವ ಆಭರಣಗಳು ಕೂಡ ಅದೇ ಪದ್ಧತಿಯಲ್ಲಿ ಇರಿಸಲ್ಪಟ್ಟವುಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ಮುರಿದ ಸ್ಥಿತಿಯಲ್ಲಿವೆ, ಎಂದು ವಿವರಿಸಿದರು.

ಆಭರಣ ಸಿಕ್ಕ ತಕ್ಷಣ ಆಸೆಗೆ ಬೀಳದೆ, ಅದನ್ನು ದೇವರೆದುರು ಇಟ್ಟು ಸರ್ಕಾರಕ್ಕೆ ಮಾಹಿತಿ ನೀಡಿದ ಆ ಕುಟುಂಬದ ಮತ್ತು ಯುವಕನ ಪ್ರಾಮಾಣಿಕತೆಯನ್ನು ಪುರಾತತ್ವ ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ. ಇಂದಿನ ಕಾಲದಲ್ಲಿ ಇಷ್ಟು ಪ್ರಮಾಣದ ಬಂಗಾರ ಸಿಕ್ಕರೂ ದೂರು ನೀಡಿದ ಅವರಿಗೆ ಸರ್ಕಾರವು ಸೂಕ್ತ ಬಹುಮಾನ ಅಥವಾ ಪ್ರೋತ್ಸಾಹಧನ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಈಗ ಮತ್ತೊಂದು ತಿರುವು ಲಭಿಸಿದ್ದು ಅಧಿಕಾರಿಗಳೇ ಇದು ಸರ್ಕಾರಿ ನಿಧಿಯಲ್ಲ ಎಂದು ಒಪ್ಪಿಕೊಂಡ ಮೇಲೆ, ಇದು ನಮ್ಮ ಪೂರ್ವಜರಿಗೆ ಸೇರಿದ ಆಸ್ತಿಯಾಗುತ್ತದೆ. ಹಾಗಾಗಿ 470 ಗ್ರಾಮ್ ಚಿನ್ನವನ್ನು ಸರಕಾರ ನಮಗೇ ವಾಪಸ್ ನೀಡಬೇಕು ಎಂದು ಕುಟುಂಬದ ಸದಸ್ಯರು ಪಟ್ಟು ಹಿಡಿದಿದ್ದು ಗ್ರಾಮಸ್ಥರು ಕೂಡ ಬೆಂಬಲ ಸೂಚಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸೂಚನೆಯಂತೆ ಸದ್ಯಕ್ಕೆ ಎಲ್ಲಾ ಆಭರಣಗಳನ್ನು ಪಂಚನಾಮೆ ನಡೆಸಿ, ತೂಕ ಹಾಕಿ ಸುರಕ್ಷಿತವಾಗಿ ಸರ್ಕಾರಿ ಖಜಾನೆಯಲ್ಲಿ ಇರಿಸಲಾಗಿದೆ. ಇದು ಪೂರ್ವಜರ ಆಸ್ತಿಯೋ ಅಥವಾ ತಾಂತ್ರಿಕವಾಗಿ ಸರ್ಕಾರಕ್ಕೆ ಸೇರಬೇಕಾದ ನಿಧಿಯೋ ಎಂಬ ಬಗ್ಗೆ ಕಾನೂನಾತ್ಮಕ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.

Leave a Reply

Your email address will not be published. Required fields are marked *