ಬೆಳ್ತಂಗಡಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ಕೋಟೆಕಾರ್ ನಿವಾಸಿ ಉಮ್ಮರ್ ಶರೀಪ್ (42) ಎಂದು ಗುರುತಿಸಲಾಗಿದೆ.

ಜ. 4 ರಂದು ನಗರ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯ ಎಂ.ಎ. ಕಾಂಪ್ಲೇಕ್ಸ್ ಸಮೀಪ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಕಾರು ಹಾಗೂ ನಾಲ್ಕು ಸಿಗರೇಟ್ ಪ್ಯಾಕೆಟ್‌ಗಳೊಳಗೆ ಎಂಟು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸಂಗ್ರಹಿಸಿದ್ದ ಎಂಡಿಎಂಎ ಮಾದಕ ವಸ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಚಾರಣೆಯಲ್ಲಿ, ಈ ಮಾದಕ ವಸ್ತುವನ್ನು ಸುನ್ನತ್ ಕೆರೆ ನಿವಾಸಿ ನೌಷಾದ್ ಎಂಬಾತ ನೀಡಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




