ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಮೂಲದ ನಿವಾಸಿಗಳಾದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಎಂದು ಗುರುತಿಸಲಾಗಿದೆ.

ಡಿ. 29 ರಂದು ಬೆಳಿಗ್ಗೆ ಲಾರಿಯೊಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ರಸ್ತೆಯ ವಿರುದ್ದ ಧಿಕ್ಕಿನಿಂದ ಬಂದಿತ್ತು. ಇದನ್ನು ಗಮನಿಸಿದ ಟೋಲ್ ಸಿಬ್ಬಂದಿಗಳು ಟೋಲ್ ಹಣ ಕೇಳಿದಾಗ ಆರೋಪಿಗಳು ಹಣ ನೀಡಲು ನಿರಾಕರಿಸಿದರು. ಅಲ್ಲದೇ ಲಾರಿಯನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟಿಗೆ ಹಾನಿ ಮಾಡಿದ್ದಾರೆ. ಬಳಿಕ ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರು ಸೇರಿ ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದು ಟೋಲ್ ಬೂತ್ ಒಳಗೆ ಅಕ್ರಮ ಪ್ರವೇಶ ಮಾಡಿ ಟೋಲ್ ಗೇಟ್ ಸಿಬ್ಬಂದಿಗಳಾದ ಅಂಕಿತ್ ಹಾಗೂ ರೋಹಿತ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.

ಈ ಕುರಿತು ಟೋಲ್ ಇನ್ ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಸರಗೋಡು-ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ (25) ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.




