ಸುಳ್ಯ: ಮೆದುಳಿನ ರಕ್ತ ಸ್ರಾವದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಯುವತಿಯನ್ನು ಸುಳ್ಯದ ರಥಬೀದಿ ನಿವಾಸಿ ಮಮತಾ ಎಂಬವರ ಪುತ್ರಿ ಸಿಂಧು ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಆದರ್ಶ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ.

ಡಿ. 16 ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಡ್ಕಾರ್ ನಲ್ಲಿ ಬಸ್ ನ ಸೀಟಿನಿಂದ ಜಾರಿ ಬಿದ್ದರೆನ್ನಲಾಗಿದೆ. ತಕ್ಷಣವೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ನರದ ಸಮಸ್ಯೆ ಉಂಟಾಗಿರುವುದು ತಿಳಿದುಬಂದಿದೆ.

ಮರುದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ಮೆದುಳಿನ ರಕ್ತ ಸ್ರಾವ ಉಂಟಾಗಿರುವ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಶಸ್ತ್ರ ಚಿಕಿತ್ಸೆ ನಂತರ ಒಮ್ಮೆ ಪ್ರಜ್ಞೆ ಬಂದಿತ್ತಾದರೂ ಬಳಿಕ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವನ್ನು ಮನೆಯವರು ಕೈಗೊಂಡಿದ್ದು ಮಂಗಳೂರು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಅಂಗಾಂಗಗಳನ್ನು ಮೈಸೂರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸುಳ್ಯದ ಚಾಲಕ ಮಾಲಕ ಸಂಘದ ಸದಸ್ಯರು ಸಹಕಾರ ನ ನೀಡಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದರು.


