ಉಳ್ಳಾಲ: ಎಮ್ ಡಿ ಎಮ್ಎ ಕ್ರಿಸ್ಟಲ್ ಎಂಬ ನಿಷೇಧಿತ ಮಾದಕ ವಸ್ತುವನ್ನು ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ (22) ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಕೈಫ್ ಎಂಬಾತನು ಉಪ್ಪಳದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರೊಂದಿಗೆ ಸೇರಿಕೊಂಡು ಕೆಸಿ ರೋಡ್ ಫಲಾಹ್ ಶಾಲಾ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಎಮ್ ಡಿಎಮ್ಎ ಕ್ರಿಸ್ಟಲನ್ನು ಪೂರೈಸುತ್ತಿದ್ದನೆಂದು ಎನ್ನಲಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಬೈಕಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಶೇಖ್ ಮೊಹಮ್ಮದ್ ಕೈಫ್ ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯಿಂದ 55,000/- ಮೌಲ್ಯದ ನಿಷೇಧಿತ 11 ಗ್ರಾಂ ಎಮ್ ಡಿಎಮ್ಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ 1 ತೂಕ ಮಾಪನ,500 ರೂ.ನಗದು ಮತ್ತು 1 ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




