ಮಂಗಳೂರು: ಬೆಂಗಳೂರಿನಿಂದ ಮಾದಕ ವಸ್ತುವಾದ ಎಂಡಿಎಂಎ ಅನ್ನು ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದಂತಹ ತಂಡವನ್ನು ಮಂಗಳೂರು ನಗರದ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು, ಮಲ್ಲೂರು ಗ್ರಾಮದ ಬದ್ರಿಯಾ ನಗರ ಹೌಸ್ ನಿವಾಸಿ ಅಹಮ್ಮದ್ ಶಾಬೀತ್(35), ಬಂಟ್ವಾಳ ತಾಲೂಕಿನ ಜೋಡುಮಾರ್ಗ, ಬಿ ಮೂಡ ಗ್ರಾಮದ ಮದ್ದ ಪರ್ಲಿಯಾ ಹೌಸ್ ನಿವಾಸಿ ಮಹಮ್ಮದ್ ಶಂಶೀರ್ (36), ಬಂಟ್ವಾಳ ತಾಲೂಕು, ಸರಪಾಡಿ ಗ್ರಾಮದ ಮಠದಬೆಟ್ಟು ಹೌಸ್ ನಿವಾಸಿ ನೌಶೀನ (27) ಎಂದು ಗುರುತಿಸಲಾಗಿದೆ.

ಅಹಮ್ಮದ್ ಶಾಬೀತ್ ಎಂಬ ಆರೋಪಿಯು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತು ಎಂಡಿಎಂಎ ಅನ್ನು ತಂದು ಸರಬರಾಜು ಮಾಡುತ್ತಿದ್ದನು. ಜೊತೆಗೆ ಯಾರಿಗೂ ಅನುಮಾನ ಬಾರದಂತೆ ಈ ತಂಡದಲ್ಲಿ ಆರೋಪಿ ಮಹಿಳೆ ನೌಶಿನ ಎಂಬವರನ್ನು ಜೊತೆಗೆ ಇರಿಸಿಕೊಂಡು ಎಂಡಿಎಂಎ ಸಾಗಾಟ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಆರೋಪಿಗಳಿಂದ ಪೊಲೀಸರು 90 ಗ್ರಾಂ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.



