Breaking
26 Sep 2026, Sat

ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ವಂಚಿಸಿದ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಉಡುಪಿ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಿಹಾರ ರಾಜ್ಯದ ಪಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 97 ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000ರೂ. ಮೌಲ್ಯದ 4 ಲ್ಯಾಪ್ ಟಾಪ್ ಗಳು ಹಾಗೂ 4,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಅವಿನಾಶ್ ಎಂಬವರು ರಿಲಯನ್ಸ್‌ ಇಂಡಸ್ಟ್ರೀಸ್‌ ಮಾಲಕತ್ವದ ಕ್ಯಾಂಪಾ ಕೋಲಾ ಫ್ರಾಂಚೈಸಿಗಾಗಿ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ನಂತರ, ಹೆಚ್ಚಿನ ಮಾಹಿತಿಗಾಗಿ ಹಾಗೂ ದಾಖಲೆಗಳಿಗಾಗಿ ಮೇಲ್‌ ಹಾಗೂ ಫೋನ್‌ ಕರೆಗಳು ಬಂದಿದ್ದವು. ಅವರ ವಿದ್ಯಾಭ್ಯಾಸ, ಬ್ಯಾಂಕ್‌ ವಿವರ ಹಾಗೂ ಆಧಾರ್‌ ದಾಖಲೆಗಳನ್ನು ಕಳುಹಿಸಿದ ನಂತರ, ಅರ್ಜಿ ಸ್ವೀಕರಿಸಲಾಗಿದೆ ಎಂದು ತಿಳಿಸಿ, ಹಂತ ಹಂತವಾಗಿ ರಿಜಿಸ್ಟ್ರೇಶನ್‌, ಪ್ರೊಡಕ್ಟ್‌ ಬುಕ್ಕಿಂಗ್‌ ಮುಂತಾದ ಕಾರಣಗಳಿಂದ ಒಟ್ಟು ₹5,72,500ನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಿದ್ದರು.

ನಿರಂತರವಾಗಿ ಹಣ ಕೇಳುತ್ತಿದ್ದರಿಂದ ಅನುಮಾನಗೊಂಡ ಅವಿನಾಶ್ ಪೊಲೀಸರಿಗೆ ದೂರು ನೀಡಿದರು. ಈ ದೂರು ಆಧರಿಸಿ ಉಡುಪಿ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *