ಕಲ್ಲಡ್ಕ: ಕೂಡು ಕುಟುಂಬ ನಾಶದಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಕಮ್ಮಿ ಆಗಿದೆ. ಮಕ್ಕಳ ಕಾಳಜಿಯ ಜೊತೆ ಪೋಷಕರ ಜವಾಬ್ದಾರಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಮಕ್ಕಳ ಚಲನ ವಲನಗಳನ್ನು ಪ್ರತಿದಿನ ಗಮನಿಸುತ್ತಾ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಬಹಳ ಇದೆ ಎಂದು ಬಂಟ್ವಾಳ ಕೆಲಿಂಜ ಶಾಲಾ ಶಿಕ್ಷಕಿ ಉಷಾ ಸುವರ್ಣ ಹೇಳಿದರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಕೆಲಿಂಜ ಅಂಗನವಾಡಿ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕೆಲಿಂಜ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸವಿತಾ ವಹಿಸಿದ್ದರು.
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್ ಅಂಗನವಾಡಿಯ ಎಲ್ಲಾ ಮಕ್ಕಳಿಗೆ ಸಮವಸ್ತ್ರ ನೀಡಿ ಶುಭ ಹಾರೈಸಿದರು.

ಪಂಚಾಯತ್ ಸದಸ್ಯ ಸಂದೀಪ್ ಪೂಜಾರಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಯ ಬಹುಮಾನಗಳನ್ನು ನೀಡಿದರು. ಬಳಿಕ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಮೀನಾಕ್ಷಿ, ಸುನೀಲ್, ಸಂಜೀವಿನಿ ಒಕ್ಕೂಟದ, ಎಲ್ ಸಿ ಆರ್ ಪಿ ಜಯಂತಿ, ಬಾಲವಿಕಾಸ ಸಮಿತಿ ಸದಸ್ಯ ಹಮೀದ್, ಚಿನ್ನಾ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಅಂಗನವಾಡಿ ಕಾರ್ಯಕರ್ತೆ ರೇವತಿ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಜಯಲಕ್ಷ್ಮಿ ಸಹಕರಿಸಿದರು.


