ಬೆಂಗಳೂರು: ಹಾಡು ಹಗಲೇ ಮನೆಗೆ ನುಗ್ಗಿದ ಹಂತಕರು ಕುತ್ತಿಗೆ ಹಿಸುಕಿ ವೃದ್ಧೆಯನ್ನು ಕೊಲೆ ಮಾಡಿ ಮಾಂಗಲ್ಯ ಸರ ದೋಚಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರಹಳ್ಳಿಯ ನ್ಯೂಮಿಲಿನಿಯಂ ಶಾಲೆ ರಸ್ತೆಯ ನಿವಾಸಿ ಲಕ್ಷ್ಮೀ (65) ಕೊಲೆಯಾದ ವೃದ್ಧೆಯಾಗಿದ್ದಾರೆ. ಉತ್ತರಹಳ್ಳಿಯಲ್ಲಿ ಅಶ್ವತ್ನಾರಾಯಣ ಹಾಗೂ ಲಕ್ಷ್ಮೀ ದಂಪತಿ ವಾಸವಾಗಿದ್ದು ಅಗರಬತ್ತಿ ಕಾರ್ಖಾನೆಯಲ್ಲಿ ಪತಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಅಶ್ವತ್ನಾರಾಯಣ ಅವರು ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಲಕ್ಷ್ಮೀ ಒಬ್ಬರೇ ಇದ್ದರು.

ಆ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ಹಂತಕರು ಲಕ್ಷ್ಮೀ ಅವರ ಮುಖದ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಅವರ ಕೊರಳಲ್ಲಿದ್ದ 45 ಗ್ರಾಂ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಮೃತರ ಪತಿ ಅಶ್ವತ್ನಾರಾಯಣ ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರು ದಾಖಲಾಗಿದೆ.



