ಉಡುಪಿ: ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯ್ಕ್ ಮನೆಗೆ ಎರಡನೇ ದಿನ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಕೋಟಿ ಮೌಲ್ಯದ ಠೇವಣಿ ಪತ್ರ ಸಿಕ್ಕಿದೆ.

ಅ.14ರಂದು ಮನೆ, ಕಚೇರಿ, ಸಂಬಂಧಿಕರ ಮನೆ ಸಹಿತ ಐದು ಕಡೆಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮವಾಗಿ ಸಂಪಾದಿಸಿದ 2.21ಕೋಟಿ ಮೌಲ್ಯದ ನಗದು, ಠೇವಣಿ ಪತ್ರ, ಭೂಮಿ ಖರೀದಿಯ ದಾಖಲೆ ಚಿನ್ನಾಭರಣ ಪತ್ತೆ ಹಚ್ಚಿದ್ದರು. ಬಳಿಕ ಅ.15ರಂದು ಮತ್ತೆ ಲಕ್ಷ್ಮೀ ನಾರಾಯಣ ಮನೆ ತಪಾಸಣೆ ಸಂದರ್ಭದಲ್ಲಿ 94ಲಕ್ಷ ರೂ. ಅಂಚೆ ಕಚೇರಿ ಮತ್ತು ಬ್ಯಾಂಕ್‌ನಲ್ಲಿಟ್ಟ ಠೇವಣಿ ಪತ್ರ ಸಿಕ್ಕಿದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯ್ಕ್ ಮೇಲೆ ಸೇವೆಗಳು ವಾಹನಗಳ ನೋಂದಣಿ, ಪರವಾನಗಿ, ತೆರಿಗೆ ಸಂಗ್ರಹ, ವಾಹನ ನೋಂದಣಿ ಪ್ರಮಾಣಪತ್ರ (RC) ನೀಡುವುದು, ಚಾಲನಾ ಪರವಾನಗಿ, ವಿಮೆ ಮತ್ತು ವಾಹನಗಳ ಸುರಕ್ಷತೆಯನ್ನು ಖಚಿತಪಡಿಸುವುದು ಇವುಗಳಿಗೆ ಸರಕಾರ ನಿಗದಿ ಪಡಿಸಿದ ಮೊತ್ತಕ್ಕಿಂತ ಅಕ್ರಮವಾಗಿ ಮೂರು ಪಟ್ಟು ಬ್ರೋಕರ್‌ಗಳ ಮೂಲಕ ವಸೂಲಿ ಮಾಡುತ್ತಿದ್ದ ಎಂಬ ದೂರು ಕೇಳಿ ಬಂದಿತ್ತು.

ದಿನನಿತ್ಯ ಕಚೇರಿಗೆ ಬರುವ ಬ್ರೋಕರ್‌ಗಳು ನೀಡುವ ಲಕ್ಷಾಂತರ ರೂ. ಸಂಗ್ರಹಿಸಿ ಅಧಿಕಾರಿಗೆ ನೀಡುತ್ತ ಇದ್ದ ಎಂಬ ಆರೋಪದಲ್ಲಿ ಅಲೆವೂರಿನ ರವಿ ಸೇರಿಗಾರ ಎಂಬಾತನ ಕಚೇರಿ, ಮನೆ ಹಾಗೂ ಬೈಕ್‌ನಲ್ಲಿ ಪರಿಶೀಲಿಸಿದಾಗ ಅಧಿಕಾರಿಗಳಿಗೆ ಸರಕಾರಿ ದಾಖಲೆ ಸಿಕ್ಕಿದೆ. ಅಲ್ಲದೆ ಲಕ್ಷ್ಮೀ ನಾರಾಯಣ ಪಿ.ನಾಯ್ಕ್ ಹೆಸರಿದ್ದ ಚೀಟಿಯಲ್ಲಿ 3.5ಲಕ್ಷ ರೂ ಚೀಲ ಬ್ರೋಕರ್ ರವಿ ಮನೆಯಲ್ಲಿ ಪತ್ತೆಯಾಗಿದೆ.



