ಬೆಂಗಳೂರು: ಅನಸ್ತೇಶಿಯಾ ನೀಡಿ ಪತ್ನಿಯನ್ನು ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯ ಪತಿಯ ಕರಾಳ ಮುಖ ಆರು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಾ.ಮಹೇಂದ್ರ ರೆಡ್ಡಿ ಆರೋಪಿ ಪತಿಯಾಗಿದ್ದಾನೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿ ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ.

ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ. 2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲುತ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ತಂದೆ ಮನೆಯಲ್ಲಿ ಹುಷಾರಿಲ್ಲದೇ ಮಲಗಿದ್ದ ಕೃತಿಕಾಗೆ ಆರೋಪಿ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದ. ಎರಡು ದಿನ ನಿರಂತರ ಮೆಡಿಸಿನ್ ನೀಡಲಾಗಿತ್ತು. ಬಳಿಕ ಈ ವರ್ಷ ಏ.23ರಂದು ಅವರು ಜ್ಞಾನ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.

ಘಟನೆ ಬಳಿಕ ಆಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕುಟುಂಬದಿಂದ ದೂರು ಪಡೆದು ಯುಡಿಆರ್ ದಾಖಲು ಮಾಡಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್ ನ್ನು ಎಫ್ ಎಸ್ ಎಲ್ಗೆ ಕಳಿಸಲಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು.

ಈ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


