ಬೆಂಗಳೂರು: ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದೀರಿ ಮಾಹಿತಿ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಕಾಂಗ್ರೆಸ್ ಎಂಬ ಅಧಿಕಾರ ಸೃಷ್ಟಿಯ ಫ್ಯಾಕ್ಟರಿ ಹೊರತುಪಡಿಸಿದಂತೆ ನಿಮ್ಮ ಜೀವನದಲ್ಲಿ ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದೀರಿ ಎಂದು ಆಧಾರ ಸಹಿತ ಮಾಹಿತಿ ಕೊಡಿ.

ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ ನಿಮ್ಮ ರಾಜಕೀಯ ಜೀವನದಲ್ಲಿ ಇತರ ಕೋಮುವಾದಿ ಸಂಘಟನೆಗಳ ಬಗ್ಗೆ, ಭಯೋತ್ಪಾದಕತೆಯ ಕುರಿತು, ಮುಸ್ಲಿಂ ಮೂಲಭೂತವಾದಿ ಸಂಸ್ಥೆಗಳ ಕುಕೃತ್ಯಗಳ ಕುರಿತು ಎಂದಾದರೂ ಒಮ್ಮೆಯಾದರೂ ನೀವು ಟೀಕೆ- ಟಿಪ್ಪಣಿ ಮಾಡಿದ್ದೀರಾ? ದೇಶದ ಮೇಲೆ ಹಲವು ಬಾರಿ ದಾಳಿ ಮಾಡಿದ್ದ ವಿದ್ವಂಸಕ ಕೃತ್ಯಗಳಲ್ಲಿ ತೊಡಗುವ ಮುಸ್ಲಿಂ ಭಯೋತ್ಪಾದಕರು ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಚಟುವಟಿಕೆಗಳ ಕುರಿತು ಎಂದಾದರೂ ಟೀಕಿಸಿದ್ದೀರಾ? ಖಂಡಿಸಿದ್ದೀರಾ? ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ವೇದಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಸಂಘಟನೆಗಳ ಹಿನ್ನೆಲೆ ಇಲ್ಲದೇ ಅಧಿಕಾರ ರಾಜಕಾರಣದ ನೆರಳಿನಲ್ಲಿ ಬಂದ ನಿಮಗೆ ರಾಷ್ಟ್ರಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ ಸಾಧ್ಯ ಎಂದು ಅವರು ನೇರವಾಗಿ ಕುಟುಕುಕಿದ್ದಾರೆ.



