ದಾವಣಗೆರೆ: ಹಲವರ ಖಾತೆಗಳಿಂದ 150 ಕೋಟಿ ರೂ.ಎಗರಿಸಿದ್ದ ಸೈಬರ್ ವಂಚಕರಲ್ಲಿ ಓರ್ವನನ್ನು ದಾವಣಗೆರೆ ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಾಸನ ಜಿಲ್ಲೆಯ ಬೇಲೂರು ಟೌನ್ ಶಾಂತಿನಗರ ನಿವಾಸಿ, ಪ್ರಕರಣದ ಎರಡನೇ ಆರೋಪಿ ಸೈಯದ್ ಅರ್ಫಾತ್ (28) ಎಂದು ಗುರುತಿಸಲಾಗಿದೆ.

ಆರೋಪಿಗಳು ದಾವಣಗೆರೆ ನಗರದ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆಯಿಂದ ಪ್ರಮೋದ್ ಎಂಬವರ 52,60, 523 ರೂ. ಹಣವನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು ಓರ್ವನನ್ನು ಸೆರೆಹಿಡಿದ್ದಾರೆ.

ವಿಚಾರಣೆಯ ವೇಳೆ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಬಹುದೊಡ್ಡ ಪ್ರಕರಣ ಬಯಲಾಗಿದೆ. ಆರೋಪಿತರ ಖಾತೆಯಲ್ಲಿ ಜು. 27 ರಿಂದ ಆಗಸ್ಟ್ 19 ರವರೆಗೆ ಸುಮಾರು 150 ಕೋಟಿ ರೂ. ಆನ್‌ಲೈನ್ ವಂಚನೆಯ ಹಣ ಜಮೆಯಾಗಿದ್ದು ಇದರಲ್ಲಿ 132 ಕೋಟಿ ರೂ. ಹಣ ವಿತ್ ಡ್ರಾ. ಮಾಡಿದ್ದಾರೆ. ಖಾತೆಯಲ್ಲಿ 18 ಕೋಟಿ ರೂ. ಇನ್ನೂ ಹಾಗೆ ಇದ್ದು ಆ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಸೈಬರ್ ಠಾಣೆ ಪೊಲೀಸರು ಇದೇ ಮೊದಲ ಬಾರಿಗೆ ಕಾರ್ಯಾಚರಣೆ ನಡೆಸಿ ಬಹುದೊಡ್ಡ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.



