ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಒಂದರಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೊತ್ತನೂರು ಬಳಿಯ ಬೈರತಿ ಬಂಡೆ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್‌ವೊಂದರಲ್ಲಿ ಅ.3ರಂದು ನಡೆದಿದೆ.
ದೊಡ್ಡಗುಬ್ಬಿಯ ಶ್ರೀಧರ್ ಎಂಬುವವರಿಗೆ ಸೇರಿದ್ದ ಅಪಾರ್ಟ್ಮೆಂಟ್ ಇದಾಗಿದ್ದು, ಕಟ್ಟಡ ಕಾರ್ಮಿಕರು ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಕ್ಲೀನ್ ಮಾಡುತ್ತಿದ್ದಾಗ ಅಸ್ಥಿಪಂಜರ ಪತ್ತೆಯಾಗಿದೆ.

ಸುಮಾರು 6-8 ತಿಂಗಳ ಹಿಂದೆ ಮೃತಪಟ್ಟಿರಬಹುದು ಎನ್ನಲಾಗಿದ್ದು, ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಮಲಗಿದ್ದ ಸ್ಥಿತಿಯಲ್ಲಿದ್ದು, ಮೇಲ್ನೋಟಕ್ಕೆ 35 ರಿಂದ 40 ವರ್ಷದ ಗಂಡಸಿನ ಅಸ್ಥಿಪಂಜರವಿರಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ತಿಂಗಳುಗಳಿಂದ ಅಪಾರ್ಟ್ಮೆಂಟ್‌ನಲ್ಲಿ ನಿರ್ಮಾಣ ಹಂತದ ಕೆಲಸ ನಿಂತು ಹೋಗಿತ್ತು. ಕಳೆದ ಎರಡು ತಿಂಗಳಿಂದ ಮತ್ತೆ ಕೆಲಸ ಆರಂಭವಾಗಿದ್ದು, ಕ್ಲೀನ್ ಮಾಡುವಾಗ ಅಸ್ಥಿಪಂಜರ ಪತ್ತೆಯಾಗಿದ್ದು, ಇದರ ಮೇಲೆ ಚೀಲ ಹಾಗೂ ಮಣ್ಣನ್ನ ಹಾಕಿ ಮುಚ್ಚಲಾಗಿದ್ದು, ಮಣ್ಣು ಹಾಗೂ ಚೀಲ ತೆಗೆದು ನೋಡಿದಾಗ ಅಸ್ಥಿಪಂಜರ ಇರುವುದು ಗೊತ್ತಾಗಿದೆ.

ಈ ಕುರಿತು ಅಪಾರ್ಟ್ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.
ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




