ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕಾವೂರು ಗಾಂಧಿನಗರದ ಖಾಸಗಿ ಲೇ ಔಟ್‌ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಗಾಂಧಿನಗರ ನಿವಾಸಿ ಚಿರಾಗ್ ಸನಿಲ್, ಅಶೋಕ ನಗರ ನಿವಾಸಿ ಆಲ್ವಿನ್ ಕ್ಲಿಂಟನ್ ಡಿ’ಸೋಜಾ, ಅಬ್ದುಲ್ ಕರೀಂ ಇ.ಕೆ, ಕುಲಶೇಖರ ಸಿಲ್ವರ್‌ಗೇಟ್ ನಿವಾಸಿ ಜನನ್ ಯಾನೆ ಜನನ್ ಜಗನ್ನಾಥ, ಬೋಳೂರಿನ ರಾಜೇಶ್ ಬಂಗೇರ ಯಾನೆ ಅಚ್ಚು ಯಾನೆ ರಕ್ಷಿತ್, ಅಶೋಕ ನಗರ ದಂಬೇಲ್ ನಿವಾಸಿ ವರುಣ್ ಗಾಣಿಗ ಎಂದು ಗುರುತಿಸಲಾಗಿದೆ.

ಆರೋಪಿಗಳು ಮುಂಬೈನಿಂದ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 22,30,000 ರೂಪಾಯಿ ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ಸಂದರ್ಭ ಕೇರಳದ ಅಬ್ದುಲ್ ಕರೀಂ ಇ.ಕೆ. ಎಂಬಾತನು ನೀಡಿದ ಹಣದಿಂದ ಮುಂಬಯಿನಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಮಾದಕ ವಸ್ತು ಖರೀದಿ ಮಾಡಿ ತಂದಿರುವುದಾಗಿ ತಿಳಿದುಬಂದಿದ್ದು, ಬಳಿಕ ಅಬ್ದುಲ್ ಕರೀಂ ಇ.ಕೆ ಎಂಬಾತನನ್ನು ಸೆ.22 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಬ್ದುಲ್ ಕರೀಂ ಇ.ಕೆ ನನ್ನು ವಿಚಾರಿಸಿದಾಗ ತನ್ನಲ್ಲಿದ್ದ ಕೊಕೇನ್ ಮಾದಕ ವಸ್ತುಗಳನ್ನು ಮೂವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದ. ಅದರಂತೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ನಿಂತುಕೊಂಡಿದ್ದ ಕುಲಶೇಖರ ಸಿಲ್ವರ್‌ಗೇಟ್ ನಿವಾಸಿ ಜನನ್ ಯಾನೆ ಜನನ್ ಜಗನ್ನಾಥ, ಬೋಳೂರಿನ ರಾಜೇಶ್ ಬಂಗೇರ ಯಾನೆ ಅಚ್ಚು ಯಾನೆ ರಕ್ಷಿತ್, ಅಶೋಕ ನಗರ ದಂಬೇಲ್ ನಿವಾಸಿ ವರುಣ್ ಗಾಣಿಗ ಎಂಬವರನ್ನು ಬಂಧಿಸಿದ್ದಾರೆ.
ಇವರುಗಳಿಂದ 1,90,000 ರೂ. ಮೌಲ್ಯದ ಸುಮಾರು 21.03 ಗ್ರಾಂ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


