ಬಂಟ್ವಾಳ : ನೀರು ತುಂಬಿದ್ದ ಕೆಂಪು ಕಲ್ಲಿನ ಹೊಂಡಕ್ಕೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಂಚಿನಡ್ಕ ಪದವು ಎಂಬಲ್ಲಿ ಸೆ.20ರಂದು ನಡೆದಿದೆ.
ಮೃತರನ್ನು ಉಳ್ಳಾಲ ತಾಲೂಕಿನ ಇರಾ ಸಮೀಪದ ಸೂತ್ರಬೈಲು ನಿವಾಸಿ ಅಬ್ದುಲ್ ಅಮೀರ್ (23) ಎಂದು ಗುರುತಿಸಲಾಗಿದೆ.

ಮೃತ ಅಬ್ದುಲ್ ಅಮೀರ್ ಅವರು, ಸಜೀಪ ಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಸಂಜೆ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿ ಇದ್ದ ಅರ್ಧ ಮುಚ್ಚಿದ ಕೆಂಪು ಕಲ್ಲಿನ ಪಾಯದಲ್ಲಿ ಕೈಕಾಲು ತೊಳೆಯಲು ಹೊಂಡಕ್ಕೆ ಇಳಿದಿದ್ದರು.
ಈ ವೇಳೆ ಅಮೀರ್ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾರೆ. ಅಲ್ಲಿದ್ದವರು ಅಮೀರ್ ಅವರನ್ನು ನೀರಿನಿಂದ ಮೇಲಕ್ಕೆತ್ತಿ ತಕ್ಷಣ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



