ಬಂಟ್ವಾಳ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ದನ ಕಳ್ಳತನಗೈದು ಕೊಂದು ಮಾಂಸ ಮಾಡಿದ ಮೂವರು ಆರೋಪಿಗಳ ಮೇಲೆ ಸಂಘಟಿತ ಅಪರಾಧ ತಡೆ ಕಾಯ್ದೆ ಅಂದರೆ ಕೋಕಾ ಪ್ರಕರಣ ದಾಖಲಿಸಲಾಗಿದೆ ಎಂದು ಎ. ಎಸ್.ಪಿ. ಡಾ| ಅರುಣ್ ಅವರು ತಿಳಿಸಿದ್ದಾರೆ.

ಈ ಕಾಯ್ದೆಯಡಿ ರಾಜ್ಯದಲ್ಲಿಯೇ ಇದು ಪ್ರಥಮ ಪ್ರಕರಣ ಎಂದಿರುವ ಅವರು ಇನ್ನಷ್ಟು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ತುಂಬೆ ಪ್ರಕರಣದಲ್ಲಿ ಶಾಮೀಲಾಗಿದ್ದ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34) ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48 )ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂಬವರನ್ನು ಈಗಾಗಲೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ- 2000ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


