ಬಂಟ್ವಾಳ: ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕನ ಜೇಬಿನಿಂದ 1 ಲಕ್ಷ ರೂ. ನಗದು ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ನಝೀರ್ ಪುನ್ನಯ್ಯಾರ್ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ ಆಗಸ್ಟ್ 14 ರಂದು ಕುಂದಾಪುರದ ರಂಗನಾಥ ಬೆಳ್ಳಾಲ ಅವರು ತಮ್ಮ ಕಾರನ್ನು ಮಾರಿ 1.60 ಲಕ್ಷ ರೂ. ಹಣದೊಂದಿಗೆ ಮತ್ತೊಂದು ಕಾರು ಖರೀದಿಸಲು ಬಿ.ಸಿ. ರೋಡ್‌ಗೆ ಬಂದಿದ್ದರು. ಆದರೆ ಕಾರು ಖರೀದಿಯ ದಾಖಲೆಗಳಲ್ಲಿ ವ್ಯತ್ಯಾಸ ಉಂಟಾದ ಕಾರಣ ಅವರು ಕೈಕಂಬದಲ್ಲಿರುವ ಸ್ನೇಹಿತನ ಮನೆಯಲ್ಲಿ ರಾತ್ರಿ ತಂಗಿದ್ದರು.

ಆಗಸ್ಟ್ 15 ರಂದು ರಂಗನಾಥ ಅವರು ಕೊಟ್ಟಿಗೆಹಾರಕ್ಕೆ ಪ್ರಯಾಣಿಸಲು ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಅವರ ಪ್ಯಾಂಟ್ ಜೇಬಿನಲ್ಲಿ 1.60 ಲಕ್ಷ ರೂ. ತಲಾ 50,000 ರೂ.ಗಳ ಮೂರು ಕಂತೆಗಳು ಮತ್ತು 10,000 ರೂ.ಗಳ ಒಂದು ಕಂತೆ ಇತ್ತು. ಅವರು ಬಸ್ ಹತ್ತಿದ ನಂತರ, 50,000 ರೂ.ಗಳ ಎರಡು ಕಂತೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಗಟನೆಯ ನಂತರ ತಕ್ಷಣವೇ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಪತ್ತೆಹಚ್ಚಿ ಮಂಗಳೂರಿನಲ್ಲಿ ಬಂಧಿಸಿದ್ದಾರೆ.


