ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯ ದಕ್ಷತೆ ಮೆರೆದ ಪೊಲೀಸ್ ಸಿಬ್ಬಂದಿಗಳಿಗೆ ಕಮಿಷನರ್ ಪ್ರಶಂಸೆ

ಮೂಡುಬಿದಿರೆ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, ಕಳೆದ ಮೂರು ತಿಂಗಳ ಅವಧಿಯಲ್ಲಿ, ಠಾಣೆಯ ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯ ದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮ ಜಿಲ್ಲಾ ಕವಾಯತು ಮೈದಾನದಲ್ಲಿ ಸೆ.12ರಂದು ನಡೆಯಿತು.

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, 32 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ಹಾಗೂ 121 ಸಿಬ್ಬಂದಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದರು.

ನಗರದ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಲು ನೆರವಾದ 19 ವಿಶೇಷ ಕಾರ್ಯ ಪಡೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಎಲ್.ಪಿ.ಸಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದ್ದು, ಇದರಲ್ಲಿ ಮುಲ್ಕಿ ಠಾಣಾ ಸರಹದ್ದಿನಲ್ಲಿ 27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.

ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿರುವ 52 ಎನ್.ಬಿ.ಡಬ್ಲ್ಯೂ ವಾರಂಟ್ ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು, ಸೊತ್ತು ಕಳವು ಪ್ರಕರಣಗಳ ಪೈಕಿ 39 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿ ಸುಮಾರು 1 ಕೋಟಿ 5 ಲಕ್ಷ ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಪೆಡ್ಲರ್ಸ್‌ಗಳ ಮೇಲೆ 37 ಪ್ರಕರಣ ದಾಖಲಿಸಿ, 73 ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, 49 ಡ್ರಗ್ ಪೆಡ್ಲರ್ಸ್‌ಗಳು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ 89 ಪ್ರಕರಣಗಳನ್ನು ದಾಖಲಿಸಿದ್ದು, 127 ಆರೋಪಿಗಳನ್ನು ವಶಕ್ಕೆ ಪಡೆದು ಅವರ ಮೂಲಕ ಪೆಡ್ಲರ್ಸ್ ಗಳ ಮಾಹಿತಿಯನ್ನು ಕಲೆ ಹಾಕಿ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮದ ಮೇಲೆ ಇಲಾಖೆಯು ತೀವ್ರ ನಿಗಾ ವಹಿಸಿದ್ದು, ದ್ವೇಷ ಭಾಷಣ, ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ, ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಈಗಾಗಲೇ 22 ಆರೋಪಿಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ.

ಪ್ರಮುಖ ಪ್ರಕರಣಗಳಲ್ಲಿ ತನಿಖಾಧಿಕಾರಿ ಹಾಗೂ ತನಿಖಾ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿ ಉತ್ತಮ ಗುಣಮಟ್ಟದ ತನಿಖೆಯನ್ನು ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಗರಿಷ್ಟ ಮಟ್ಟದ ಶಿಕ್ಷೆಯನ್ನು ವಿಧಿಸಲು ಸಹಕರಿಸಿರುತ್ತಾರೆ.

Leave a Reply

Your email address will not be published. Required fields are marked *