ಬಂಟ್ವಾಳ: ಕಳೆದ ಮೂರ್ನಾಲ್ಕು ತಿಂಗಳಿಂದ ಮರಳು ಮತ್ತು ಕೆಂಪು ಕಲ್ಲು ಸಮಸ್ಯೆ ಎದುರಾಗಿದ್ದು ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿದ್ದಲ್ಲದೆ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಡ ಕೂಲಿ ಕಾರ್ಮಿಕರ ಬಾಳಿನ ಬೆಳಕಿಗಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಗಪ್ಪ ಬಂಗೇರ ಇವರ ನೇತೃತ್ವದಲ್ಲಿ ಸೆ. 11. ರಂದು “ಭವತಿ ಭಿಕ್ಷಾಂ ದೇಹಿ” ʼಸರ್ಕಾರಕ್ಕೆ ಮತಿಯಿಲ್ಲ, ಕಾರ್ಮಿಕರಿಗೆ ಗತಿಯಿಲ್ಲʼ ಎಂಬ ಘೋಷಣೆಯಡಿ ಗೋಪಾಲಕೃಷ್ಣ ದೇವಸ್ಥಾನ ವಠಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆಯು ಮುಖ್ಯ ರಸ್ತೆಯ ಮೂಲಕ ಮಡಂತ್ಯಾರು ಪೇಟೆಯವರೆಗೆ ಸಾಗಿ ಬಳಿಕ ಪುಂಜಾಲಕಟ್ಟೆಗೆ ಬಂದು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾಕಾರರು ಜಮಾಯಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ತುಂಗಪ್ಪ ಬಂಗೇರ ಅವರು 5 ತಿಂಗಳಿಂದ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ಮರಳು ಮತ್ತು ಕೆಂಪು ಕಲ್ಲು ಇಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ಉದ್ಬವವಾಗಿದೆ ಎಂದರು.

ಕಲಾವಿದ ದಿನೇಶ್ ಶೆಟ್ಟಿ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಅವರು ಮಾತನಾಡಿ ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಕಿಡಿ ಕಾರಿದರು.
ಪ್ರತಿಭಟನೆಯ ಬಳಿಕ ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.




