ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು 10 ದಿನಗಳ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಜ್ಜಾಗಿದ್ದು, ಇಂದು ಗುರುವಾರ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೊಂಡಿತು.
ಕಳೆದ ವರ್ಷ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರಳ ಮಟ್ಟದಲ್ಲಿ ಆಚರಣೆಗೆ ಮುಂದಾಗಿತ್ತು. ಆದರೆ, ಈ ವರ್ಷ ರಾಜ್ಯಾದ್ಯಂತ ಸಾಕಷ್ಟು ಮಳೆಯಿಂದ ಜಲಾಶಯಗಳು ತುಂಬಿದ ನಂತರ ಸರ್ಕಾರವು ಅದ್ಧೂರಿ ಉತ್ಸವಗಳನ್ನು ಘೋಷಿಸಿದ್ದು, ಪರಿಸ್ಥಿತಿ ಉತ್ತಮವಾಗಿ ಬದಲಾಗಿವೆ. ರಾಜ್ಯ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪ್ರಾಯೋಜಕತ್ವದ ಹೊರತಾಗಿ ಆಚರಣೆಗೆ 40 ಕೋಟಿ ರೂಪಾಯಿ ಈ ಬಾರಿ ಖರ್ಚು ಮಾಡುತ್ತಿದೆ.
ಇಂದು ಬೆಳಗ್ಗೆ 9:15 ರಿಂದ 9:45 ರ ನಡುವಿನ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಾಹಿತಿ ಮತ್ತು ವಿದ್ವಾಂಸ ಹಂಪ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ದಸರಾ ಉತ್ಸವವನ್ನು ಉದ್ಘಾಟಿಸಿದರು.




ಈಗಾಗಲೇ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಬೃಹತ್ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ತಾಯಿ ಚಾಮುಂಡಿ ಉತ್ಸವ ಮೂರ್ತಿ ಶುದ್ಧೀಕರಣ ಮಾಡಲಾಗಿದ್ದು ಕೆಂಪು ಬಣ್ಣದ ಸೀರೆಯಲ್ಲಿ ತಾಯಿ ಕಂಗೋಳಿಸುತ್ತಿದ್ದಾಳೆ. ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕ ಮಾಡಿದ ಬಳಿಕ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನ ಮಾಡಲಾಯಿತು,ಈ ಮೂಲಕ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾದ ಧಾರ್ಮಿಕ ಕಾರ್ಯಗಳು ಆರಂಭವಾಗೊಂಡವು.
ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮೈಸೂರು ಜಿಲ್ಲಾ ಸಚಿವ ಡಾ.ಎಚ್.ಸಿ.ಮಹದೇವಪ್ಪ, ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.



