ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಆ. 28 ರಂದು ಕೆ.ಎಸ್.ಆರ್.ಟಿ.ಸಿ ಬಸ್- ರಿಕ್ಷಾ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿರುವುದಿಲ್ಲ; ಬದಲಾಗಿ ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಹಿರಿಯ ನಿಯಂತ್ರಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಬಸ್ ಚಾಲಕ ನಿಜಲಿಂಗಪ್ಪ ಚಲವಾದಿಯ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಹೊರಟಿದ್ದ ಬಸ್ ಮಧ್ಯಾಹ್ನ 1:45 ರ ವೇಳೆಗೆ ತಲಪಾಡಿ ಸಮೀಪಿಸಿದಾಗ ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಾಯಿಸಿದ್ದು, ಆಟೋಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿರುತ್ತಾರೆ. ಅಷ್ಟರಲ್ಲಿ ಬಸ್ಸು ಆಟೋಗೆ ಮಾರಣಾಂತಿಕ ಢಿಕ್ಕಿಯಾಗಿ, ಬಸ್ ಹಠಾತ್ತನೆ ಸ್ಕಿಡ್ ಆಗಿ ತಿರುಗಿ ನಿಂತಿದೆ.

ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಭಯಗೊಂಡು ಚಾಲಕ ತನ್ನ ಸೀಟಿನಿಂದ ಕೆಳಗಿಳಿದು ಓಡಿ ಹೋಗಿದ್ದಾನೆ. ಇದರಿಂದಾಗಿ ಬಸ್ಸು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಢಿಕ್ಕಿಯಾಗಿ ನಿಂತಿದೆ ಎಂದು ತಿಳಿಸಿದ್ದಾರೆ.
ನಿಗಮದ ಎಲ್ಲಾ ಬಸ್ಸುಗಳಿಗೆ ಆಂತರಿಕ ವಿಮೆ ಇರುತ್ತದೆ. ಅಪಘಾತದಲ್ಲಿ ಮೃತ ಪಟ್ಟವರ ವಾರಸುದಾರರಿಗೆ ಈ ಪರಿಹಶರ ನಿಧಿಯಿಂದ ತಲಾ 1 ಲಕ್ಷ ರೂಪಾಯಿಗಳಂತೆ ತುರ್ತು ಮಧ್ಯಂತರ ಪರಿಹಾರವನ್ನು ನೀಡಲಾಗಿದೆ. ಗಾಯಗೊಂಡ ಇಬ್ಬರ ಸಂಪೂರ್ಣ ವೈದ್ಯಕೀಯ ವೆಚ್ಚದ ಮೊತ್ತವನ್ನು ನಿಗಮದ ವತಿಯಿಂದ ಭರಿಸಲಾಗುವುದು.

ಅಪಘಾತಕ್ಕೀಡಾದ ವಾಹನದ ಎಫ್.ಸಿ ಆ. 26 ರಂದು ನವೀಕರಣಗೊಂಡು ಆರ್.ಟಿ.ಓ ಫಿಟ್‍ನೆಸ್ ದೃಢೀಕರಣ ಪ್ರಮಾಣಪತ್ರ ಪಡೆಯಲಾಗಿದೆ. ಆ. 27 ರಂದು ಈ ಬಸ್ಸನ್ನು ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನಿಯೋಜಿಸಲಾಗಿತ್ತು. ಘಟಕದಿಂದ ಮಾರ್ಗ ಪ್ರಾರಂಭವಾದ ಸಮಯದಿಂದ 9 ಸುತ್ತುವಳಿಗಳನ್ನು ಪೂರ್ಣಗೊಳಿಸಿ ಅಪಘಾತವಾಗುವವರೆಗೆ ಸುಮಾರು 540 ಕಿ.ಮೀ ಕ್ರಮಿಸಿದ್ದು, 10ನೇ ಸುತ್ತುವಳಿ ಸಂದರ್ಭ ಅಪಘಾತ ಸಂಭವಿಸಿದೆ. ಅಪಘಾತವು ಚಾಲಕನ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ್ದು, ಯಾವುದೇ ರೀತಿಯ ಬ್ರೇಕ್‍ಫೇಲ್ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.



