ಬೆಳ್ತಂಗಡಿ: ಬೀದಿ ನಾಯಿಗಳಿಂದ ಬೆನ್ನಟ್ಟಿ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿರುವ ಘಟನೆ ಆ.21 ರಂದು ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯ ಹುಣಸೆಕಟ್ಟೆಯಲ್ಲಿ ನಡೆದಿದೆ.

ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮನುಷ್ಯರಿಗೆ ಹಾಗೂ ಕಾಡು ಪ್ರಾಣಿಗಳಿಗೆ ತುಂಬಾನೇ ತೊಂದೆರೆಯನ್ನುಂಟು ಮಾಡುತ್ತಿದೆ. ಈ ಸಂದರ್ಭದಲ್ಲಿ ನಾಯಿಗಳ ಹಿಂಡೊಂದು ಜಿಂಕೆಯನ್ನು ಬೆನ್ನಟ್ಟಿದ್ದು ನಾಯಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜಿಂಕೆ ನಾರಾಯಣ ಪೂಜಾರಿ ಎಂಬವರ ಮನೆಯ ಬಳಿ ಬಟ್ಟೆ ಒಗೆಯಲು ಬಳಸುವ ಕಲ್ಲಿಗೆ ಡಿಕ್ಕಿ ಹೊಡೆದು ಗಾಯಗೊಂಡಿದೆ.

ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಜಿಂಕೆಯನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಿದರು. ಜಿಂಕೆಯ ಆರೋಗ್ಯ ಸುಧಾರಿಸಿದ ಬಳಿಕ ಅದನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪಟ್ಟಣ ಪಂಚಾಯತ್‌ಗೆ ಒತ್ತಾಯಿಸಿದ್ದಾರೆ.



