ಬಂಟ್ವಾಳ: ಭಾರತ ಎಲ್ಲರೂ ಸೌಹಾರ್ದತೆಯಿಂದ ಬಾಳಿ ಬದುಕುವ ದೇಶವಾಗಿದೆ. ಹಲವಾರು ಜಾತಿ ಮತ ಪಂಥಗಳಿದ್ದರೂ ಮಾನವೀಯತೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಸೌಹಾರ್ದತೆಯ ದೇಶ ನಮ್ಮದು ಎನ್ನುವುದಕ್ಕೆ ಅದೆಷ್ಟೋ ವರ್ಷಗಳ ಇತಿಹಾಸವಿದೆ. ಇವತ್ತಿನ ಪೀಳಿಗೆ ಸೌಹಾರ್ದತೆಯ ಪ್ರತೀಕವೆನಿಸುವ ಸರ್ವಧರ್ಮೀಯ ಗ್ರಂಥವೆಂದೇ ಪರಿಭಾವಿಸುವ ನಮ್ಮ ಸಂವಿಧಾನಕ್ಕೆ ಗೌರವ ಮನ್ನಣೆ ಕೊಡಬೇಕು ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ಹೇಳಿದರು.

ಅವರು ತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಭಟ್ ವಹಿಸಿದ್ದರು. ಬಹುವಿಧ ಸಮಾಜವಾದ ಭಾರತದಲ್ಲಿ ಏಕತೆಗೆ ಆದ್ಯತೆ ನೀಡಬೇಕು. ಶಾಂತಿ ನೆಮ್ಮದಿಯ ಬದುಕಿಗೆ ಬೇಕಾಗಿರುವ ಅತ್ಯಮೂಲ್ಯ ಸಂಗತಿಯೆಂದರೆ ಎಲ್ಲರೂ ಸದ್ಭಾವನೆಯಿಂದ ಇರುವುದಾಗಿದೆ. ವಿದ್ಯಾರ್ಥಿ ಜೀವನದಿಂದಲೇ ಜಾತಿ ಮತ ಪಂಥ ಭೇದವೆಣಿಸದೆ ಒಟ್ಟಾಗಿ ಬದುಕುವುದನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿ ದಿವ್ಯ ಕೆ.ಎಸ್.ಉಪಸ್ಥಿತರಿದ್ದರು.




