Breaking
21 Jun 2026, Sun

ಮಣಿಪಾಲ: ಮಾದಕ ವಸ್ತು ಮಾರಾಟ: ಮೂವರು ಪೊಲೀಸ್‌ ವಶಕ್ಕೆ

ಮಣಿಪಾಲ: ಗಾಂಜಾ ಮಾದಕ ವಸ್ತು ಮತ್ತು ಎಲ್ಎಸ್‌ಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೇರಳದ ತಿರುವನಂತಪುರ ಜಿಲ್ಲೆಯ ಅಫ್ಶಿನ್, ಕಾಸರಗೋಡಿನ ಮನೀಶ್, ಇಂದ್ರಾಳಿ ನಿವಾಸಿ ಶಿವನಿಧಿ ಆಚಾರ್ಯ(20) ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದು ಮತ್ತೋರ್ವ ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಗಾಂಜಾ ಮತ್ತು ಡ್ರಗ್ಸ್ ತರಿಸಿ ಮಣಿಪಾಲದಲ್ಲಿ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಆ.16ರ ರಾತ್ರಿ ಹೆರ್ಗ ಗ್ರಾಮದ ಈಶ್ವರನಗರ ನರಸಿಂಗೆ ದೇವಸ್ಥಾನ ರಸ್ತೆಯ ಬಳಿ ಇರುವ ಕಟ್ಟಡದ ಮೊದಲನೇ ಮಹಡಿಯ ರೂಮ್‌ಗೆ ದಾಳಿ ನಡೆಸಿದ್ದು, ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಅಫ್ಶಿನ್ ಹಾಗೂ ಶಿವನಿಧಿ ಆಚಾರ್ಯರನ್ನು ಬಂಧಿಸಿತ್ತು. ಇವರಿಂದ 1 ಕೆಜಿ 237 ಗ್ರಾಂ ಗಾಂಜಾ, ಸ್ಟ್ರಿಪ್ ಮಾದಕ ವಸ್ತು, ಡಿಜಿಟಲ್ ಸ್ಕೇಲ್, 2000ರೂ. ನಗದು ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತನಿಖೆ ಮುಂದುವರೆಸಿದ ಮಣಿಪಾಲ ಎಸ್ಸೈ ಅಕ್ಷಯ ಕುಮಾರಿ ಆ.17ರಂದು ಗಾಂಜಾ ಮಾರಾಟ ಪ್ರಕರಣದ ಇನ್ನೊರ್ವ ಆರೋಪಿ ಮನೀಶ್‌ನನ್ನು ಮಣಿಪಾಲ ವಿದ್ಯಾರತ್ನ ನಗರದ ಫ್ಲಾಟ್‌ನಲ್ಲಿ ಬಂಧಿಸಿ, 653 ಗ್ರಾಂ ಗಾಂಜಾ 2 ಡಿಜಿಟಲ್ ಸ್ಕೇಲ್, 1 ಗಾಂಜಾ ಕ್ರಷರ್, 3000ರೂ. ನಗದು ಹಾಗೂ 1 ಮೊಬೈಲ್ ಪೋನನ್ನು ವಶಪಡಿಸಿಕೊಂಡಿದ್ದಾರೆ.

ಇವರು ವಿದ್ಯಾರ್ಥಿಗಳನ್ನು ಹಾಗೂ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಗಾಂಜಾ ಮಾರಾಟ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *