ಮಂಗಳೂರು: ಹಬ್ಬ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫ್ಲೆಕ್ಸ್, ಬ್ಯಾನರ್ ಅಳವಡಿಸದಂತೆ ಮಂಗಳೂರು ಮಹಾ ನಗರ ಪಾಲಿಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಮುಂದೆ ಬರುವ ಯಾವುದೇ ಹಬ್ಬ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ಯಾವುದೇ ರೀತಿಯ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಆಳವಡಿಸುವಂತಿಲ್ಲ ಎಂದು ಮಂಗಳೂರು ಮಹಾನಗರ “ಫ್ಲೆಕ್ಸ್ ಮುಕ್ತ ಹಬ್ಬಗಳ ಆಚರಣೆ, ಸ್ವಚ್ಚ ಪರಿಸರ ನಮ್ಮೆಲ್ಲರ ರಕ್ಷಣೆ’ ಎಂಬ ಧೈಯ ವಾಕ್ಯದೊಂದಿಗೆ ಜನರ ಸಹಕಾರ ಕೇಳಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ತೆನೆಗಳ ಹಬ್ಬ ಹೀಗೆ ಒಂದರ ಬಳಿಕ ಒಂದರಂತೆ ಹಬ್ಬಗಳ ಆಚರಣೆ ನಡೆಯಲಿದೆ. ಹಿಂದಿನ ವರ್ಷಗಳಲ್ಲಿ ಈ ಸಂದರ್ಭದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳು ನಗರದಲ್ಲಿ ರಾರಾಜಿಸುತ್ತಿದ್ದವು. ಆದರೆ ಈ ವರ್ಷ ಅವುಗಳ ನಿಯಂತ್ರಣಕ್ಕೆ ಮನಪಾ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್ ಗಳನ್ನು ಅಳವಡಿಸುವುದರಿಂದ ಭಾರೀ ಪ್ರಮಾಣದ ಘನತ್ಯಾಜ್ಯ ಉಂಟಾಗಿ ಪರಿಸರಕ್ಕೆ ಮಾರಕವಾಗುತ್ತಿದೆ. ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲು ಕಾನೂನಿನಲ್ಲಿ ಅವಕಾಶಗಳಿಲ್ಲ. ನಿಯಮ ಉಲ್ಲಂಘಿಸಿ ಅಳವಡಿಸಿದರೆ ಕರ್ನಾಟಕ ತೆರೆದ ಜಾಗ ವಿರೂಪಗೊಳಿಸುವಿಕೆ ತಡೆ ಕಾಯ್ದೆ 1981ರಡಿಯಲ್ಲಿ ಸಂಘಟಕರ ವಿರುದ್ಧ ದಂಡ ವಿಧಿಸಲಾಗುವುದರೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.



