ಚಾಮರಾಜನಗರ: ವ್ಯಕ್ತಿಯೋರ್ವರು ಕಾಡಾನೆ ಜತೆ ಸೆಲ್ಫೀ ತೆಗೆಯಲು ಹೋಗಿ ದಾಳಿಗೆ ಒಳಗಾದ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಸ್ತೆಯಲ್ಲಿ ನಡೆದಿದೆ.
ವ್ಯಕ್ತಿಯನ್ನು ನಂಜನಗೂಡು ಮೂಲದ ಬಸವರಾಜು ಎಂದು ಗುರುತಿಸಲಾಗಿದೆ.

ಘಟನೆ ಬಳಿಕ ಬಸವರಾಜು ಅವರು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡು ಕೇರಳ ಕಡೆಗೆ ಹೋಗಿಬಂದಿದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಪತ್ತೆ ಮಾಡಿ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲ ಅವರಿಂದಲೇ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಎಚ್ಚರಿಕೆಯ ಸಂದೇಶ ಸಾರುವ ವಿಡಿಯೋ ಮಾಡಿದ್ದು ಅದರಲ್ಲಿ ಬಸವರಾಜು ಅವರು ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ವಾಪಸ್ ಬರುವಾಗ ಮೋಜು ಮಸ್ತಿಗೆ ಕಾಡಾನೆ ಜತೆ ಸೆಲ್ಫೀ ತೆಗೆಯಲು ಮುಂದಾಗಿದ್ದೆ. ಈ ವೇಳೆ ನನ್ನ ಮೇಲೆ ಕಾಡಾನೆ ದಾಳಿ ನಡೆಸಿತು. ನನ್ನ ಪ್ರಾಣ ಉಳಿದಿದ್ದೇ ಹೆಚ್ಚು. ಯಾರು ಕೂಡ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡಬೇಡಿ. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಅದಕ್ಕಿಂತಲೂ ಜೀವ ಉಳಿದ್ದದ್ದೇ ಹೆಚ್ಚು’ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.




