ಹವಾಮಾನ ಆಧಾರಿತ ಬೆಳೆ ವಿಮೆ ಸೇರಿದಂತೆ ಕೃಷಿ ಸಾಲಗಳಿಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆ ಯನ್ನು ಕಡ್ಡಾಯವಾಗಿ ರೈತರು ಮಾಡಬೇಕು ಅಥವಾ ಖಾಸಗಿ ಏಜನ್ಸಿ ಮೂಲಕ ಮಾಡಿಸಬೇಕು ಇಲ್ಲವಾದರೆ ಬೆಳೆ ವಿಮೆ ಹಾಗೂ ಇನ್ನಿತರ ಕೃಷಿ ಸಾಲಗಳಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂಬ ಸರಕಾರದ ಅಸಂಬದ್ಧ ಆದೇಶದ ಕುರಿತು ಸಂಗಬೆಟ್ಟು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯಲ್ಲಿ ರೈತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ ಸರಕಾರದ ಈ ರೀತಿಯ ಅಸಮರ್ಪಕ ನೀತಿ ಯಿಂದಾಗಿ ಎಷ್ಟೋ ಜನ ರೈತರು ತಮ್ಮ ಬೆಳೆ ಸಮೀಕ್ಷೆ ಮಾಡದೇ ಅಥವಾ ಖಾಸಗಿ ಏಜನ್ಸಿ ಗಳಿಂದಲೂ ಬೆಳೆ ಸಮೀಕ್ಷೆ ನಡೆಸಲಾಗದೆ ಬೆಳೆ ವಿಮೆ ಯೋಜನೆಗೆ ಪ್ರಿಮಿಯಂ ಕಟ್ಟಲಾಗದೆ ಕರಾವಳಿ ಜಿಲ್ಲೆಗಳಲ್ಲಿ ಸಾವಿರಾರು ಅಡಿಕೆ ಬೆಳೆಯುವ ರೈತರು ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆಯಲು ವಂಚಿರಾಗಿದ್ದಾರೆ ಎಂದರು. ಆದುದರಿಂದ ಮುಂದಕ್ಕೆ ಬೆಳೆ ವಿಮೆ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯದಿಂದ ವಿನಾಯಿತಿ ನೀಡಬೇಕು ಹಾಗೂ ಅಡಿಕೆ ಬೆಳೆಗಳಿಗೆ ಸಂಬಂಧ ಪಟ್ಟಂತೆ ಒಮ್ಮೆ ಬೆಳೆ ಸಮೀಕ್ಷೆ ಮಾಡಿದ್ರೆ ನಂತರ ಕನಿಷ್ಠ 10 ವರ್ಷಗಳ ವರೆಗೂ ಅದೇ ಬೆಳೆ ಸಮೀಕ್ಷೆ ಉರ್ಜಿತದ ಆಧಾರದಲ್ಲಿ ಬೆಳೆ ವಿಮೆ ಸೇರಿದಂತೆ ಇನ್ನಿತರ ಕೃಷಿ ಸಾಲ ಗಳಿಗೆ ಪಹಣಿ ಪತ್ರಿಕೆ ಪರಿಶೀಲನೆ ನೋಡಿಕೊಂಡು ಪರಿಗಣಿಸಬೇಕು ಎಂದು ಸರಕಾರದ ಗಮನಕ್ಕೆ ತರಲು ಒತ್ತಾಯಿಸಿದರು.
ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರಿ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲು ನಿರ್ಣಯಿಸಲಾಗುವುದು ಎಂದರು.
ಇಂದು ಸಂಗಬೆಟ್ಟು ಗ್ರಾಮ ಪಂಚಾಯತಿಯಲ್ಲಿ 2024-2025ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅಭಿವೃದ್ಧಿ ಕೆಲಸ ಸೇರಿದಂತೆ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಯಲ್ಲಿ ಕೆಲವೊಂದು ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿದರು 15 ನೇ ಹಣಕಾಸು ಯೋಜನೆ ಕ್ರಿಯಾಯೋಜನೆಯ ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಮಾಡಿ ಪ್ರಗತಿ ಸಾಧಿಸಲು ಸಲಹೆ-ಸೂಚನೆ ನೀಡಿದರು.
ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ತಮ್ಮ ಇಲಾಖಾ ಮಾಹಿತಿ ನೀಡಿದರು, ವಾರ್ಡ್ ಸಭೆಗಳ ವರದಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯ್ಕ್ ಮಂಡಿಸಿ ಈ ಬಗ್ಗೆ ಬಂದಂತಹ ಬೇಡಿಕೆಗಳನ್ನು ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು.ಗ್ರಾಮ ಪಂಚಾಯತ್ ಕಚೇರಿ ಸಿಬ್ಬಂದಿ ಮಹಾಬಲ ನಾಯ್ಕ ಜಮಾ –ಖರ್ಚು ವಿವರ ಮಂಡಿಸಿದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರಿ ವಹಿಸಿದ್ದರು. ಸಭೆಯಲ್ಲಿ .ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಕುಲಾಲ್,ಸದಸ್ಯರಾದ ಸಂದೇಶ ಶೆಟ್ಟಿ, ದಾಮೋದರ ಪೂಜಾರಿ, ಉದಯ ಪೂಜಾರಿ, ದೇವಪ್ಪ ಕರ್ಕೇರ, ಸುನೀಲ್ ಶೆಟ್ಟಿಗಾರ್, ಶಕುಂತಲಾ, ಶಾಂತ, ಬೆನಡಿಕ್ಟ ಡಿ ‘ಕೊಸ್ತಾ, ಪ್ರೇಮ, ಹೇಮಾಲತ, ಸೇರಿದಂತೆ ಪಂಚಾಯತ್ ರಾಜ್ ಇಂಜಿನಿಯರ್ ಕೃಷ್ಣ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ರೋಹಿಣಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.