Breaking
22 Mar 2026, Sun

ಪರೀಕ್ಷೆಯಲ್ಲಿ ಫೇಲ್, ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಮಡಿಕೇರಿ: ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಅನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಮನನೊಂದು ಕಾಲೇಜಿನ ಹಾಸ್ಟೆಲ್ನಲ್ಲಿಯೇ ನೇಣಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೊನ್ನಂಪೇಟೆ ಎಂಬಲ್ಲಿ ನಡೆದಿದೆ.

ರಾಯಚೂರು ನಿವಾಸಿಯಾದ ಮಹಾಂತಪ್ಪ ಎಂಬವರ ಏಕೈಕ ಪುತ್ರಿ ತೇಜಸ್ವಿನಿ (19) ತಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಹಾಸ್ಟೆಲ್ನಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.

ಈಕೆ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಎಐಎಂಎಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಸೋಮವಾರದಂದು ತೇಜಸ್ವಿನಿ ಎಂದಿನಂತೆ ತರಗತಿಗಳಿಗೆ ಹಾಜರಾಗಿ, ಸಂಜೆ ಸುಮಾರು 4 ಗಂಟೆಗೆ ಹಾಸ್ಟೆಲ್ ಕೋಣೆಗೆ ಮರಳಿದ್ದಳು.

ಸುಮಾರು 4:30ರ ವೇಳೆಗೆ ಆಕೆಯ ಸಹಪಾಠಿಯೊಬ್ಬರು ಕೊಠಡಿಗೆ ಬಂದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಎಷ್ಟೇ ಬಡಿದರೂ, ಕೂಗಿದರೂ ಬಾಗಿಲು ತೆರೆಯದಿದ್ದಾಗ, ಆತಂಕಗೊಂಡ ಸಹಪಾಠಿ ತಕ್ಷಣ ಹಾಸ್ಟೆಲ್ ಮೇಲ್ವಿಚಾರಕರಿಗೆ ವಿಷಯ ಮುಟ್ಟಿಸಿದ್ದಾರೆ.

ಅವರು ಬಂದು ಬಾಗಿಲು ತೆರೆದು ನೋಡಿದಾಗ, ತೇಜಸ್ವಿನಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಘಟನಾ ಸ್ಥಳದಲ್ಲಿ ತೇಜಸ್ವಿನಿ ಬರೆದಿಟ್ಟಳೆನ್ನಲಾದ ಡೆತ್ ನೋಟ್ ಪತ್ತೆಯಾಗಿದೆ.

ಅದರಲ್ಲಿ, “ನಾನು ಆರು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದೇನೆ. ನನಗೆ ಮುಂದೆ ಓದಲು ಇಷ್ಟವಿಲ್ಲ, ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದಿರುವುದಾಗಿ ತಿಳಿದುಬಂದಿದೆ.

ತೇಜಸ್ವಿನಿಯಈ ಅನಿರೀಕ್ಷಿತ ನಿರ್ಧಾರ ಆಕೆಯ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *